ಸೋಮವಾರಪೇಟೆ, ಜೂ.16: ಸ್ಥಳೀಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಒದಗಿಸಿದ ಅನುದಾನದ ವಿಚಾರದಲ್ಲಿ ಆಡಳಿತ ಮಂಡಳಿ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದ ಘಟನೆ ಜರುಗಿತು.

ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯ ಆರಂಭದಲ್ಲಿ ರಾಜ್ಯ ಸರ್ಕಾರ ಬರ ನಿರ್ವಹಣೆ ಯೋಜನೆಯಡಿಯಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಶಾಶ್ವತ ಯೋಜನೆಗೆ 22 ಲಕ್ಷ ಒದಗಿಸಿರುವ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಯಿತು.

ಇದಕ್ಕೆ ಸದಸ್ಯರಾದ ಆದಂ ಹಾಗೂ ಶೀಲಾ ಡಿಸೋಜ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಯೋಜನೆ ರೂಪಿಸುವಾಗ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಆದರೆ ಟೆಂಡರ್ ಅನುಮೋದನೆಗೆ ಮಾತ್ರ ಸಭೆ ಕರೆಯಲಾಗಿದೆ. ಇದು ನಮಗೆ ಸಂಬಂಧಿಸಿದ್ದಲ್ಲ. ಆದ್ದರಿಂದ ಚರ್ಚೆ ಅನವಶ್ಯಕ ಎಂದು ಪ್ರತಿಪಾದಿಸಿದರು.

ಈ ಸಂದರ್ಭ ಅಧ್ಯಕ್ಷೆ ವಿಜಯಲಕ್ಷ್ಮಿ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಒದಗಿಸಿದ ಅನುದಾನಕ್ಕೆ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‍ಫೋರ್ಸ್ ರಚಿಸಿ ಆ ಮೂಲಕ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಪ.ಪಂ. ಅಧ್ಯಕ್ಷರು ಕೂಡ ಒಬ್ಬ ಸದಸ್ಯರಾಗಿದ್ದಾರೆ ಎಂದು ಮಾಹಿತಿ ನೀಡಿದಾಗ ಮತ್ತಷ್ಟು ಕೆರಳಿದ ಈರ್ವರು, ಹಾಗಿದ್ದಾಗ ಈ ವಿಷಯವನ್ನು ಸಭೆಗೆ ತಂದಿದ್ದಾದರೂ ಏಕೆ? ಅನುಮೋದನೆ ಯನ್ನು ಸಹ ಟಾಸ್ಕ್‍ಫೋರ್ಸ್ ಕಮಿಟಿಯೇ ನೀಡಲಿ. ಈ ವಿಷಯಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಯಾವದೇ ನಿರ್ಣಯ ಕೈಗೊಳ್ಳಬಾರದು ಎಂದು ಪಟ್ಟು ಹಿಡಿದರು.

ಈ ಸಂದರ್ಭ ಸಭೆಯಲ್ಲಿ ಕೆಲಕಾಲ ಗದ್ದಲ, ಗೊಂದಲ ಪರಸ್ಪರ ವಾಗ್ವಾದಗಳು ನಡೆದವು. ಅಧ್ಯಕ್ಷೆ ಕೆಲಕಾಲ ಸಭೆಯನ್ನು ಮುಂದೂಡಿ ಹೊರ ನಡೆದರು. 10 ನಿಮಿಷಗಳ ನಂತರ ಸಭೆ ಆರಂಭಗೊಂಡಿತಾದರೂ ಪುನಃ ಅದೇ ಪರಿಸ್ಥಿತಿ ಮುಂದುವರೆಯಿತು. ಈ ಸಂದರ್ಭ ನಾಮ ನಿರ್ದೇಶಿತ ಸದಸ್ಯ ಇಂದ್ರೇಶ್ ಮಾತನಾಡಿ, ಕಾನೂನು ರೀತಿಯಲ್ಲಿ ಏನು ಮಾಡ ಬಹುದು ಎಂಬದನ್ನು ತಿಳಿದುಕೊಂಡು ಅದರಂತೆ ಮುಂದುವರೆಯಿರಿ ಎಂದರು. ಮತ್ತೋರ್ವ ಸದಸ್ಯ ನಾಗರಾಜ್, ಕುಡಿಯುವ ನೀರಿನ ಯೋಜನೆ ಜನಪರ ಕಾರ್ಯವಾಗಿದೆ ಎಂದು ಅಭಿಪ್ರಾಯಿಸಿದರಲ್ಲದೆ, ಪ್ರತಿ ಸಭೆಯಲ್ಲೂ ಇದೇ ರೀತಿ ಕಚ್ಚಾಟ, ಕಿರುಚಾಟ ನೋಡಿ ಬೇಸರವಾಗಿದೆ ಎಂದು ಅಭಿಪ್ರಾಯಿಸಿದ್ದು ಕಾಂಗ್ರೆಸ್ ಸದಸ್ಯರಿಗೆ ಇರಿಸು ಮುರಿಸು ಉಂಟುಮಾಡಿತು. ಮುಖ್ಯಾಧಿಕಾರಿ ನಾಚಪ್ಪ ಮಾತನಾಡಿ, ಸಭೆಯಲ್ಲಿ ಹಳೆಯ ವಿಚಾರಗಳ ಚರ್ಚೆ ಬೇಡ. ಅಭಿವೃದ್ಧಿ ದೃಷ್ಟಿಯಿಂದ ಸಲಹೆ ನೀಡಿ, ಸಭೆಯಲ್ಲಿ ಸಮಾಧಾನದಿಂದ ವರ್ತಿಸಿ ಎಂದು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ.

ಈ ಸಂದರ್ಭ ಮಧ್ಯೆ ಪ್ರವೇಶಿಸಿದ ಸದಸ್ಯ ಬಿ.ಎಂ. ಸುರೇಶ್, ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿದೆ. ಆ ಬಗ್ಗೆ ಸದಸ್ಯರ ಆಕ್ಷೇಪವಿದ್ದರೆ ನಡಾವಳಿ ಪುಸ್ತಕದಲ್ಲಿ ಬರೆಯಿಸಲಿ ಎಂದಾಗ ಮತ್ತೊಮ್ಮೆ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಸದಸ್ಯರಾದ ಲೀಲಾ ನಿರ್ವಾಣಿ, ಸುಷ್ಮ, ಸುಶೀಲ ಅವರುಗಳು ಅಧ್ಯಕ್ಷೆಯ ಪರವಾಗಿ ನಿಂತರೆ ವೆಂಕಟೇಶ್, ಈಶ್ವರ್ ಮೂಕಪ್ರೇಕ್ಷಕರಾಗಿದ್ದರು. ಸದಸ್ಯ ಆದಂ, ಶೀಲಾ ಡಿಸೋಜ ಹಾಗೂ ಮೀನಾಕುಮಾರಿ ತಮ್ಮ ಆಕ್ಷೇಪ ದಾಖಲಿಸಿದರೆ, ಸದಸ್ಯ ಬಿ.ಸಿ.ವೆಂಕಟೇಶ್ ಮಾತ್ರ ಈ ವಿಷಯದಲ್ಲಿ ತನ್ನ ಆಕ್ಷೇಪವಿಲ್ಲವೆಂದು ಹೇಳುವ ಮೂಲಕ ಕಾಂಗ್ರೆಸ್ ಸದಸ್ಯರನ್ನು ಮತ್ತೊಮ್ಮೆ ಮುಜುಗರಕ್ಕೀಡು ಮಾಡಿದರು.

ಇಷ್ಟೆಲ್ಲಾ ವಾಗ್ವಾದದ ನಡುವೆಯೇ ನೀರು ಶುದ್ದೀಕರಣ ಘಟಕಕ್ಕೆ 12 ಲಕ್ಷ ವೆಚ್ಚದ 125 ಕೆ.ವಿ. ಜನರೇಟರ್ ಖರೀದಿ ಹಾಗೂ ಯಡವನಾಡು ಪಂಪ್ ಹೌಸ್‍ಗೆ 10 ಲಕ್ಷ ವೆಚ್ಚದಲ್ಲಿ 100 ಎಚ್.ಪಿ. ಮೋಟಾರ್ ಹಾಗೂ ಪಂಪ್ ಖರೀದಿಸುವ 22 ಲಕ್ಷದ ಟೆಂಡರ್‍ಗೆ ಅನುಮೋದನೆ ನೀಡಲಾಯಿತು.

ಇತ್ತೀಚೆಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಹಣದಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಘಟಕಕ್ಕೆ ಪ್ರಧಾನಮಂತ್ರಿ ಹಾಗೂ ಶಾಸಕರ ಭಾವಚಿತ್ರ ಹಾಕಲಾಗಿದೆ. ಆದರೆ ಮುಖ್ಯಮಂತ್ರಿಗಳ ಚಿತ್ರ ಹಾಕಲಿಲ್ಲ ಏಕೆ? ಎಂದು ಸದಸ್ಯೆ ಶೀಲಾ ಡಿಸೋಜ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ವಿಜಯಲಕ್ಷ್ಮೀ, ಸಭೆಯ ಅಜೆಂಡಾದಲ್ಲಿಲ್ಲದ ವಿಚಾರಗಳನ್ನು ಪ್ರಸ್ತಾಪಿಸಬೇಡಿ ಎಂದಾಗ ಆಕ್ರೋಶಗೊಂಡ ಸದಸ್ಯ ಆದಂ, ಕಳೆದ ಸಭೆಯಲ್ಲಿ ವಿಚಾರವಿಲ್ಲದಿದ್ದರೂ ನನ್ನ ಸದಸ್ಯತ್ವ ಅನರ್ಹಗೊಳಿಸುವಂತೆ ನಿರ್ಣಯ ಕೈಗೊಂಡಿಲ್ಲವೆ? ಮತ್ತೋರ್ವ ಸದಸ್ಯ ಬಿ.ಎಂ. ಸುರೇಶ್ ಮೇಲೆಯೂ ಪೊಲೀಸ್ ದೂರಿದೆ; ಅವರ ಸದಸ್ಯತ್ವವನ್ನೂ ಅನರ್ಹಗೊಳಿಸುವಂತೆ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡು ಸದಸ್ಯರ ನಡುವೆ ಕೂಗಾಟ ನಡೆಯಿತು. ಯಾರು ಏನು ಹೇಳುತ್ತಿದ್ದಾರೆ ಎಂಬದು ತಿಳಿಯದಾಯಿತು. ಒಟ್ಟಿನಲ್ಲಿ ಬರ ನಿರ್ವಹಣಾ ಯೋಜನೆಯಡಿ ಪಟ್ಟಣಕ್ಕೆ ದೊರಕಿದ 22 ಲಕ್ಷ ರೂ. ಹಣ ಅಭಿವೃದ್ದಿ ಯೋಜನೆಯ ಟೆಂಡರ್ ಅನುಮೋದನೆಯ ಸಭೆ ಸದಸ್ಯರ ನಡುವಿನ ಕೂಗಾಟಕ್ಕೆ ವೇದಿಕೆಯಾಯಿತು.