ಮಡಿಕೇರಿ, ಜೂ. 17: ಜಿಲ್ಲಾ ಕಾಂಗ್ರೆಸ್‍ನ ಮಹಿಳಾ ಘಟಕವನ್ನು ಬೂತ್ ಮಟ್ಟದಿಂದಲೇ ಸಂಘಟಿಸುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಬಲವರ್ಧನೆಗೊಳಿಸಲಾಗುವದೆಂದು ಘಟಕದ ಜಿಲ್ಲಾಧ್ಯಕ್ಷೆ ಕುಮುದಾ ಧರ್ಮಪ್ಪ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್‍ನ ಮಹಿಳಾ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಕಾಂಗ್ರೆಸ್ ನಿರ್ಣಾಯಕ ರೀತಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿದ್ದು, ಮಹಿಳಾ ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖ ರಾಗಬೇಕೆಂದು ಕರೆ ನೀಡಿದರು. ಬೂತ್ ಮಟ್ಟದಲ್ಲಿ ಪಕ್ಷದ ಮಹಿಳಾ ಸಮಿತಿಗಳನ್ನು ರಚಿಸುವದಕ್ಕಾಗಿ ಸದ್ಯದಲ್ಲಿಯೇ ಜಿಲ್ಲಾ ವ್ಯಾಪಿ ಪ್ರವಾಸ ಕೈಗೊಳ್ಳಲಾಗುವದು. ಮಹಿಳಾ ಕಾಂಗ್ರೆಸ್ಸಿಗರನ್ನು ಭೇಟಿಯಾಗಿ ಪಕ್ಷ ಸಂಘಟನೆ ಕುರಿತು ಚರ್ಚಿಸಲಾಗುವದು. ಸರಕಾರದ ಸೌಲಭ್ಯಗಳನ್ನು ಕಾರ್ಯ ಕರ್ತರ ಮೂಲಕ ಮಹಿಳೆಯರಿಗೆ ಸಿಗುವಂತೆ ನೋಡಿಕೊಳ್ಳಲಾಗುವದು ಎಂದು ಕುಮುದಾ ಧರ್ಮಪ್ಪ ಹೇಳಿದರು.

ಮಹಿಳಾ ಸಮಾವೇಶ

ಸದ್ಯದಲ್ಲಿಯೇ ಮಡಿಕೇರಿ ಅಥವಾ ಕುಶಾಲನಗರದಲ್ಲಿ ಕಾಂಗ್ರೆಸ್ ಮಹಿಳಾ ಸಮಾವೇಶವನ್ನು ನಡೆಸಲು ಸಭೆ ನಿರ್ಣಯ ಕೈಗೊಂಡಿತು. ಸಮಾವೇಶದಲ್ಲಿ ವಿಧಾನ ಪರಿಷತ್‍ನ ನೂತನ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಗ್ರಾ.ಪಂ.- ತಾ.ಪಂ. ಮತ್ತು ಜಿ.ಪಂ.ನ ಮಹಿಳಾ ಕಾಂಗ್ರೆಸ್ ಸದಸ್ಯರನ್ನು ಸನ್ಮಾನಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಪಕ್ಷದ ಜಿಲ್ಲಾ ವಕ್ತಾರ ಕೆ.ಕೆ. ಮಂಜುನಾಥ್ ಕುಮಾರ್, ಮಡಿಕೇರಿ ಬ್ಲಾಕ್ ಅಧ್ಯಕ್ಷ ಕೆ.ಎಂ. ಗಣೇಶ್, ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ನಗರಸಭಾ ಅಧ್ಯಕ್ಷೆ ಶ್ರೀಮತಿ ಬಂಗೇರ, ಮಾಜಿ ಅಧ್ಯಕ್ಷರುಗಳಾದ ಕಾವೇರಮ್ಮ ಸೋಮಣ್ಣ, ಜುಲೇಕಾಬಿ, ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಜಿಲ್ಲಾ ಕಾಂಗ್ರೆಸ್ ಸದಸ್ಯೆ ಪುಟ್ಟಲಕ್ಷ್ಮಿ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷೆ ಪ್ರೇಮಾ ಕೃಷ್ಣಪ್ಪ, ಮಹಿಳಾ ಕಾಂಗ್ರೆಸ್‍ನ ಮಡಿಕೇರಿ ಬ್ಲಾಕ್ ಅಧ್ಯಕ್ಷೆ ಮೀನಾಕ್ಷಿ ಕೇಶವ, ವೀರಾಜಪೇಟೆ ಅಧ್ಯಕ್ಷೆ ರಾಣು ಮಂದಣ್ಣ, ಸೋಮವಾರಪೇಟೆ ಅಧ್ಯಕ್ಷೆ ಸಲೀನಾ ಪೇದ್ರು, ನಾಪೋಕ್ಲು ಅಧ್ಯಕ್ಷೆ ರಾಣಿ ಗಣಪತಿ ಹಾಗೂ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರಮೀಳ ಉಪಸ್ಥಿತರಿದ್ದರು.