ಮಡಿಕೇರಿ, ಮೇ 14: ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಪುರಾತನ ಹಿನ್ನೆಲೆಯ ಪವಿತ್ರ ಭಾವನೆ ಹೊಂದಿರುವ ಬ್ರಹ್ಮಗಿರಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿರುವ ಕ್ರಮವನ್ನು ಹಿರಿಯರಾದ ಎಂ.ಬಿ. ದೇವಯ್ಯ ಅವರು ಸ್ವಾಗತಿಸಿದ್ದಾರೆ. ಈ ಕುರಿತು ‘ಶಕ್ತಿ’ಗೆ ಹೇಳಿಕೆ ನೀಡಿರುವ ಅವರು ಕ್ಷೇತ್ರದ ಪಾವಿತ್ರ್ಯತೆ ಉಳಿಸಲು ಈ ಕ್ರಮ ಸೂಕ್ತವಾದ ಹಾಗೂ ಕಠಿಣವಾದ ನಿರ್ಧಾರವಾಗಿದೆ. ಈ ತನಕ ಯಾರೂ ಇಂತಹ ಗಂಭೀರ ನಿಲುವು ಕೈಗೊಂಡಿರಲಿಲ್ಲ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದು ಪ್ರವಾಸಿ ತಾಣವಲ್ಲ ಮೋಜು ಮಸ್ತಿಗೆ ಅವಕಾಶ ನೀಡಬಾರದು. ಆದರೆ ಈ ಹಿಂದಿನ ಸತ್‍ಸಂಪ್ರದಾಯದ ಪ್ರಕಾರ ನೈಜ ಭಕ್ತರು ಆಗಮಿಸಿದರೆ ಪೂರ್ವಾಪರ ಅರಿತು ಅವಕಾಶ ನೀಡುವ ಕುರಿತು ಸಣ್ಣ ಮಾರ್ಪಾಡು ಮಾಡಿದಲ್ಲಿ ಭಕ್ತರ ಭಾವನೆಗೆ ಚ್ಯುತಿಯಾಗದು. ಈ ನಿಟ್ಟಿನಲ್ಲಿ ಚರ್ಚೆ ನಡೆಸಿ ಸೂಕ್ತವಾದ ತೀರ್ಮಾನ ಕೈಗೊಂಡರೆ ಅದು ಇನ್ನೂ ಉತ್ತಮ ನಿಲುವಾಗಲಿದೆ ಎಂದು ದೇವಯ್ಯ ಅಭಿಪ್ರಾಯಪಟ್ಟಿದ್ದಾರೆ.