ಸೋಮವಾರಪೇಟೆ,ಜೂ.26: ಪ್ರತಿನಿತ್ಯ ಯೋಗ ಮಾಡುವ ಅಭ್ಯಾಸವನ್ನು ಮೈಗೂಢಿಸಿಕೊಂಡಲ್ಲಿ ರೋಗ ರಹಿತ ಜೀವನ ನಡೆಸಬಹುದು ಎಂದು ಆರ್ಟ್ ಆಫ್ ಲಿವಿಂಗ್ನ ವಿಜಯ್ ಅಭಿಪ್ರಾಯಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ವಲಯ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ, ಜೇಸಿಐ ಸೋಮವಾರಪೇಟೆ ಪುಷ್ಪಗಿರಿ, ರೋಟರಿ ಹಿಲ್ಸ್, ಹಿಂದೂ ಜಾಗರಣಾ ವೇದಿಕೆ, ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ನಿವೃತ್ತ ಸರಕಾರಿ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಕಳೆದ ಒಂದು ವಾರಗಳಿಂದ ಪಟ್ಟಣದ ಕೊಡವ ಸಮಾಜದಲ್ಲಿ ಆಯೋಜಿv Àಗೊಂಡಿರುವ 945ನೇ ಮದ್ಯವರ್ಜನಾ ಶಿಬಿರದ ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡುತ್ತಾ ಮಾತನಾಡಿದರು.
ಶಿಬಿರದಲ್ಲಿ 45 ಮಂದಿ ಶಿಬಿರಾರ್ಥಿಗಳಿದ್ದು ಪ್ರತಿನಿತ್ಯ ಬೆಳಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ಯೋಗ ತರಬೇತಿಗಳನ್ನು ನೀಡುತ್ತಿದ್ದು, ಸೂರ್ಯ ನಮಸ್ಕಾರ, ನಾಡಿ ಶೋಧನಾ, ಭಸ್ತ್ರಿಕಾ ಪ್ರಾಣಾಯಾಮ, ಕಪಾಲ್ ಭಾತಿ ಸೇರಿದಂತೆ ವಿವಿಧ ಯೋಗಗಳ ಬಗ್ಗೆ ಮಹೇಶ್ ತಿಮ್ಮಯ್ಯ ಹಾಗೂ ವಿಜಯ್ ಹಾನಗಲ್ ತರಬೇತಿ ನೀಡಿದರು. ಶಿಬಿರದ ಅಧಿಕಾರಿ ಗಣೇಶ್ ಆಚಾರ್ಯ, ಆರೋಗ್ಯ ಸಹಾಯಕಿ ನೇತ್ರಾವತಿ, ಸೇವಾನಿರತೆ ಎಂ.ಎ. ರುಬೀನಾ ಹಾಜರಿದ್ದರು.