ಸೋಮವಾರಪೇಟೆ, ಜೂ. 23: ಮದ್ಯ ಮುಕ್ತ ಸಮಾಜದಿಂದ ದೇಶದ ಪ್ರಗತಿ ಸಾಧ್ಯ ಎಂದು ದುಂಡಳ್ಳಿ ಮುದ್ದಿನ ಕಟ್ಟೆ ಮಠಾಧೀಶರಾದ ಶ್ರೀ ಶಿವಲಿಂಗಾಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಆಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಸೋಮವಾರಪೇಟೆ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ವಲಯ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ, ಜೇಸಿಐ ಸೋಮವಾರಪೇಟೆ ಪುಷ್ಪಗಿರಿ, ರೋಟರಿ ಹಿಲ್ಸ್, ಹಿಂದೂ ಜಾಗರಣಾ ವೇದಿಕೆ, ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ನಿವೃತ್ತ ಸರಕಾರಿ ನೌಕರರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನವಜೀವನ ಸಮಿತಿ ಮತ್ತು ದಾನಿಗಳ ಸಹಕಾರದೊಂದಿಗೆ 8 ದಿನಗಳ ಕಾಲ ಪಟ್ಟಣದ ಕೊಡವ ಸಮಾಜದಲ್ಲಿ ಆಯೋಜಿತ ಗೊಂಡಿರುವ 945ನೇ ಮದ್ಯವರ್ಜನಾ ಶಿಬಿರದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಉಪನ್ಯಾಸ ನೀಡಿದರು.

ಮನುಷ್ಯನ ಜೀವನ ಶಾಶ್ವತವಲ್ಲ. ಆದರೆ, ಆತ ಜೀವನದಲ್ಲಿ ನಡೆದುಕೊಂಡ ಉತ್ತಮ ನಡವಳಿಕೆ ಶಾಶ್ವತವಾಗಿ ಉಳಿಯಬಲ್ಲುದು. ಮನುಷ್ಯ ಕುಡಿತದ ಚಟಕ್ಕೆ ಬಲಿಯಾದರೆ ಅತನನ್ನು ಇಡೀ ಸಮಾಜವೇ ಕೇವಲವಾಗಿ ಕಾಣುತ್ತದೆ ಮಾತ್ರವಲ್ಲ, ತನ್ನ ಕುಟುಂಬದ ವಿಶ್ವಾಸದಿಂದಲೂ ದೂರವಾಗುತ್ತಾನೆ. ಒಬ್ಬ ವ್ಯಕ್ತಿ ಮದ್ಯವನ್ನು ವರ್ಜಿಸಿ, ಮತ್ತೆ ಸಮಾಜ ಮುಖಿಯಾಗಿ ಮುನ್ನಡೆದರೆ, ಸಮಾಜ ಕೊಡುವ ಗೌರವ ಅಪಾರವಾಗಿರುತ್ತದೆ. ಈ ನಿಟ್ಟಿನಲ್ಲಿ ಸರ್ವರೂ ಸನ್ಮಾರ್ಗದಲ್ಲಿ ಸಾಗು ವಂತಾಗಬೇಕೆಂದು ಮಾರ್ಗದರ್ಶನ ಮಾಡಿದರು. ಶಿಬಿರವನ್ನು ಉದ್ಘಾಟಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಮಾತನಾಡಿ, ಕುಡಿತದ ಚಟವು ಮನುಷ್ಯನ ದೇಹವನ್ನು ಸುಡುತ್ತದೆಯಲ್ಲದೆ, ತನ್ನನ್ನೇ ನಂಬಿರುವ ಕುಟುಂಬವನ್ನು ಬೀದಿಪಾಲಾಗಿಸುತ್ತದೆ. ಕುಡುಕರನ್ನು ಯಾರೂ ಬಾಂಧವ್ಯದಿಂದ ಕಾಣಲಾರರು. ಕುಡಿತಕ್ಕೆ ಒಳಗಾದವರು ಸಮಾಜದಲ್ಲಿ ಕಳೆದುಕೊಂಡ ಸ್ಥಾನಮಾನವನ್ನು ಮತ್ತೆ ಅಲಂಕರಿಸಿಕೊಳ್ಳಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೂಪಿಸುವ ಮದ್ಯವರ್ಜನಾ ಶಿಬಿರ ಸಹಕಾರಿ ಯಾಗಿದ್ದು, ಕುಡಿತಕ್ಕೆ ದಾಸರಾದವರು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.

ಶಿಬಿರಾಧಿಕಾರಿ ಧರ್ಮಸ್ಥಳದ ಗಣೇಶ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 25 ವರ್ಷಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಾಹುಬಲಿಯನ್ನು ಪ್ರತಿಷ್ಠಾಪಿಸಿದ ಸವಿನೆನಪಿನೊಂದಿಗೆ ಆರಂಭಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಂದು ಕರ್ನಾಟಕ ರಾಜ್ಯದ 27 ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಾ ಇದೀಗ ಕೇರಳದ ಕಾಸರಗೋಡು ಜಿಲ್ಲೆಗೂ ತನ್ನ ಸೇವೆಯನ್ನು ವೃದ್ಧಿಸಿದೆ. ಯೋಜನೆ ಮೂಲಕ ನಡೆಸಿದ 944 ಮದ್ಯವರ್ಜನಾ ಶಿಬಿರದ ಮೂಲಕ ಸುಮಾರು 72 ಸಾವಿರ ಮಂದಿಯನ್ನು ಕುಡಿತದ ಚಟದಿಂದ ಬಿಡಿಸುವ ಮೂಲಕ ನವಜೀವನದ ಹೊಸ್ತಿಲಿಗೆ ತಲುಪಿಸಿದ ಕೀರ್ತಿ ವೀರೇಂದ್ರ ಹೆಗ್ಗಡೆಯವರಿಗೆ ಸಲ್ಲುತ್ತದೆ ಎಂದರು.

ಅಧ್ಯಕ್ಷತೆಯನ್ನು 945ನೇ ಶಿಬಿರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಿರೀಶ್ ಕೆ.ಜೆ. ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬಾನಂಗಡ ಅರುಣ್, ಸದಸ್ಯ ಪ್ರಮೋದ್À, ಯೋಜನೆಯ ಜಿಲ್ಲಾ ನಿರ್ದೇಶಕ ಸೀತಾರಾಮ್ ಶೆಟ್ಟಿ, ಪ.ಪಂ. ಮಾಜಿ ಅಧ್ಯಕ್ಷೆ ಲೀಲಾ ನಿರ್ವಾಣಿ, ಹಾನಗಲ್ ಗ್ರಾ.ಪಂ. ಅಧ್ಯಕ್ಷೆ ರೇಣುಕಾ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.