ಶನಿವಾರಸಂತೆ, ಮೇ 12: ನಿಡ್ತ ಗ್ರಾಮ ಪಂಚಾಯಿತಿ ವ್ತಾಪ್ತಿಯ ಒಡೆಯನಪುರ ಗ್ರಾಮದ ಸರ್ವೆ ನಂ. 124/1 ರ 5 ಏಕರೆ ಜಾಗದಲ್ಲಿ ದಿನಾಂಕ 14.2.1976 ರಲ್ಲಿ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಆಶ್ರಯ ಯೋಜನೆಯ ಅಡಿಯಲ್ಲಿ ನಿವೇಶನ ಕಲ್ಪಿಸಲು ಮಂಜೂರು ಮಾಡಿದ್ದು, ಆದರೆ ಇಲ್ಲಿಯವರೆಗೆ ನಿವೇಶನ ರಹಿತರಿಗೆ ಯಾವದೇ ಜಾಗವನ್ನು ಕೊಟ್ಟಿರುವದಿಲ್ಲ. ಈ ಜಾಗದಲ್ಲಿ ಮುಳುಗಡೆ ಸಂತ್ರಸ್ಥರಿಗೆಂದು ಹಾಸನ ಜಿಲ್ಲೆಯ ಸಂತ್ರಸ್ಥ ರಮೇಶ್ ಅವರಿಗೆ 4 ಏಕರೆ ಜಾಗ ಕೊಡುವಂತೆ ಉಚ್ಛ ನ್ಯಾಯಾಲಯದ ಆದೇಶವಿದ್ದು, ಈ ಜಾಗದ ಅಕೇಶಿಯ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯವರು ಸ್ಥಳಕ್ಕೆ ತೆರಳಿದಾಗ ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ನೂರಾರು ಮಂದಿ ಗ್ರಾಮಸ್ಥರು ತಡೆಯೊಡ್ಡಿ ಅರಣ್ಯ ಇಲಾಖೆಯವರನ್ನು ವಾಪಾಸ್ಸು ಕಳುಹಿಸಿದ ಘಟನೆ ನಡೆಯಿತು. ಈ ಜಾಗದಲ್ಲಿ 3 ಏಕರೆ ನವಗ್ರಾಮ ನಿರ್ಮಾಣಕ್ಕೆ ಹಾಗೂ 1 ಏಕರೆ ಕಸ ವಿಲೇವಾರಿಗೆ ಮೀಸಲಿಡುವಂತೆ ಕೋರಲಾಗಿತ್ತು.

ಅರಣ್ಯ ವಲಯಾಧಿಕಾರಿ ಎಂ.ಎಂ. ಅಚ್ಚಪ್ಪ ಅವರು ‘ಶಕ್ತಿ’ಯೊಂದಿಗೆ ಮಾತನಾಡಿ, ಈ ಜಾಗವು ರಾಜ್ಯ ಹೆದ್ದಾರಿಯ ಸಮೀಪದಲ್ಲಿದ್ದು, ಜಾಗದಲ್ಲಿ 4 ಏಕರೆ ಜಾಗವು ಸಂತ್ರಸ್ಥ ರಮೇಶ್ ಅವರಿಗೆ ಮಂಜೂರಾತಿಯಾಗಿದ್ದು, ಜಾಗ ಕೊಡುವಂತೆ ಉಚ್ಛ ನ್ಯಾಯಾಲಯದ ಆದೇಶವಿದೆ. ಈಗಾಗಲೇ ಇಲಾಖೆಯವರು 3ನೇ ಬಾರಿ ಈ ಸ್ಥಳದ ಅಕೇಶಿಯ ಮರವನ್ನು ಕಡಿಯಲು ಹೋದಾಗ ಗ್ರಾಮಸ್ಥರು ತಡೆಮಾಡಿರುತ್ತಾರೆ. ಈ ಬಗ್ಗೆ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಯವರ ಗಮನಕ್ಕೆ ತರಲಾಗಿದ್ದು, ಅಧಿಕಾರಿ ಯವರು ಈ ಜಾಗದ ಬದಲು ಬೇರೆ ಕಡೆ ಜಾಗ ಕೊಡಿಸಲು ಪ್ರಯತ್ನಿಸುವ ದಾಗಿಯು ಅಲ್ಲಿಯವರೆಗೆ ತಟಸ್ಥರಾಗಿ ರುವಂತೆ ಸೂಚಿಸಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಗ್ರಾಮಸ್ಥರ ಪರವಾಗಿ ಗ್ರಾಮಸ್ಥರೊಂದಿಗೆ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಎಸ್.ಎಸ್. ರವಿಕಿರಣ್ ಅವರೊಂದಿಗೆ ಮಾತನಾಡಿದಾಗ ಠಾಣಾಧಿಕಾರಿ ಅವರು ಮಾತನಾಡುತ್ತಾ ಉಚ್ಛ ನ್ಯಾಯಾಲಯದ ಆದೇಶವಿದೆ. ಈ ಆದೇಶವನ್ನು ರದ್ದು ಪಡಿಸಲು ಪ್ರಯತ್ನಿಸಿ, ಅರಣ್ಯ ಇಲಾಖೆ ಉಚ್ಛ ನ್ಯಾಯಾಲಯದ ಆದೇಶಕ್ಕೆ ಪೊಲೀಸರ ನೆರವು ಕೇಳಿದರೆ ಕಾನೂನಿನ ನೆರವು ನೀಡಲೇ ಬೇಕಾಗುತ್ತದೆ ಎಂದರು.

ಈ ಸಂದರ್ಭ ನಿಡ್ತ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ. ಮುಸ್ತಫ, ಮಾಜಿ ಅಧ್ಯಕ್ಷ ಜಿ.ಎಂ. ಹಮೀದ್, ಪಂಚಾಯಿತಿ ಸದಸ್ಯರುಗಳಾದ ಅಶೋಕ್, ನಳಿನಿ, ದಯಾನಂದ, ಕಳಮ್ಮ, ಯಶೋಧ ಪುಟ್ಟಸ್ವಾಮಿ, ಗಂಗಾಧರ, ವಿಜಯಕುಮಾರ್, ನಟೇಶ್, ಪೂವಮ್ಮ, ವಿಶ್ವನಾಥ ಪ್ರದೀಪ್, ಉಸ್ಮಾನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.