ಸೋಮವಾರಪೇಟೆ, ಮೇ 18: ನಗರ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ನಿನ್ನೆ ರಾತ್ರಿ ಸುರಿದ ಮಳೆ-ಗಾಳಿಗೆ ಹಲವು ಮರಗಳು ಧರೆಗುರುಳಿದ್ದರೆ, ಕಿರಗಂದೂರು ಗ್ರಾಮದಲ್ಲಿ ವಾಸದ ಮನೆಗೆ ಸಿಡಿಲು ಬಡಿದು, ಪರಿಕರಗಳಿಗೆ ಹಾನಿಯಾದ ಘಟನೆ ನಡೆದಿದೆ.
ಕಿರಗಂದೂರು ಗ್ರಾಮದ ಊರುಬೆಟ್ಟ ನಿವಾಸಿ ವೆಂಕಟೇಶ್ ಎಂಬವರ ಮನೆಗೆ ನಿನ್ನೆ ರಾತ್ರಿ ಸಿಡಿಲು ಬಡಿದ ಪರಿಣಾಮ ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿ ಹಾನಿಗೀಡಾಗಿದೆ. ಮನೆಯಲ್ಲಿ ಎಲ್ಲರೂ ಮಲಗಿದ್ದ ಸಂದರ್ಭ ರಾತ್ರಿ 11 ಗಂಟೆ ಸುಮಾರಿಗೆ ಸಿಡಿಲು ಬಡಿದಿದ್ದು ಪರಿಣಾಮ ಮನೆಯ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಹೆಂಚುಗಳು ಪುಡಿಯಾಗಿದ್ದರೆ, ಟಿ.ವಿ. ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೀಡಾಗಿವೆ. ಅದೃಷ್ಟವಶಾತ್ ಯಾವದೇ ಪ್ರಾಣಹಾನಿ ಸಂಭವಿಸಿಲ್ಲ.
ಘಟನೆ ಸ್ಥಳಕ್ಕೆ ತಾಲೂಕು ತಹಶೀಲ್ದಾರ್ ಬಿ.ಸಿ. ಶಿವಪ್ಪ, ತಾಲೂಕು ಪಂಚಾಯಿತಿ ಸದಸ್ಯ ಬಿ.ಬಿ. ಸತೀಶ್, ಕಿರಗಂದೂರು ಗ್ರಾಮ ಪಂಚಾಯಿತಿ ಸದಸ್ಯ ಭರತ್ ಕುಮಾರ್ ಅವರುಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಿಡಿಲಿನಿಂದಾಗಿ ನಷ್ಟಗೊಂಡಿರುವ ವೆಂಕಟೇಶ್ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡ ಬೇಕೆಂದು ಭರತ್ ಅವರು ತಹಶೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ.
ಸೋಮವಾರಪೇಟೆಯಿಂದ ಶನಿವಾರಸಂತೆಗೆ ತೆರಳುವ ರಾಜ್ಯ ಹೆದ್ದಾರಿಯ ಗೌಡಳ್ಳಿ ಗ್ರಾಮದ ಬಳಿ ರಸ್ತೆಗೆ ಅಡ್ಡಲಾಗಿ ಮರವೊಂದು ಧರೆಗುರುಳಿದ್ದರೆ, ಅದೇ ಮಾರ್ಗದ ಕಿಬ್ಬೆಟ್ಟ ಗ್ರಾಮದ ಬಳಿ ಮರವೊಂದು ಧರೆಗುರುಳಿ ಕೆಲಕಾಲ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಪಟ್ಟಣದ ಹೊರವಲಯದಲ್ಲಿರುವ ಹೆಚ್ಪಿ ಗ್ಯಾಸ್ ಗೋದಾಮಿನ ಆವರಣ ಗೋಡೆಯ ಮೇಲೆ ರಸ್ತೆಗಡ್ಡಲಾಗಿ ಸಿಲ್ವರ್ ಮರವೊಂದು ಬಿದ್ದಿದ್ದು, ಆಗಬಹುದಾಗಿದ್ದ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ. ಗೌಡಳ್ಳಿಯಲ್ಲಿ ಮರ ಉರುಳಿದ ರಭಸಕ್ಕೆ ಎರಡು ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ತಂತಿಗಳು ತುಂಡಾದ ಪರಿಣಾಮ ಆ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಇಲ್ಲದೆ, ಜನರು ಸಮಸ್ಯೆ ಎದುರಿಸುವಂತಾಯಿತು. ಕಳೆದ 24 ಗಂಟೆಗಳಲ್ಲಿ ಸೋಮವಾರಪೇಟೆ ಕಸಬಾ ಹೋಬಳಿಯಲ್ಲಿ 15.4 ಮಿ.ಮೀ., ಶಾಂತಳ್ಳಿ 14.2, ಶನಿವಾರಸಂತೆ 28.4, ಕೊಡ್ಲಿಪೇಟೆ 25.5, ಸುಂಟಿಕೊಪ್ಪ 8 ಮಿ. ಮೀಟರ್ ಮಳೆಯಾಗಿದೆ.