ಸೋಮವಾರಪೇಟೆ, ಜೂ.25: ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಮೋಹನ್ ಅವರ ಕೊಲೆಗೆ ಯತ್ನಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಕರೀಂ ಬೇಗ್ ಹಾಗೂ ಆತನ ಸಹೋದರ ಅಝೀಂ ಬೇಗ್‍ನನ್ನು ಬಂಧಿಸುವಲ್ಲಿ ತನಿಖಾ ತಂಡದ ಪೊಲೀಸರು ಯಶಸ್ವಿ ಯಾಗಿದ್ದು, ಮೈಸೂರು ನಗರದಲ್ಲಿ ಆರೋಪಿಗಳನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ.

ವಿವಿಧ ಹಿಂದೂಪರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಮೋಹನ್ ಅವರು, ಕಳೆದ ತಾ. 19ರಂದು ರಾತ್ರಿ 9.40ರ ಸುಮಾರಿಗೆ ನಗರದಿಂದ ಮನೆಗೆ ತೆರಳುತ್ತಿದ್ದ ಸಂದರ್ಭ ದಾರಿ ತಡೆದು ಕಬ್ಬಿಣದ ರಾಡ್‍ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಈರ್ವರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಜನತಾ ಕಾಲೋನಿ ನಿವಾಸಿ ಅಂಬು ಅವರ ಪುತ್ರರಾದ ಕರೀಂ ಬೇಗ್ ಹಾಗೂ ಅಝೀಂ ಬೇಗ್ ಘಟನೆ ನಂತರ ತಲೆಮರೆಸಿಕೊಂಡಿದ್ದರು. ಇವರನ್ನು ಬೆನ್ನಟ್ಟಿದ ಪೊಲೀಸರ ತಂಡ ಮೈಸೂರಿನಲ್ಲಿ ವಶಕ್ಕೆ ಪಡೆದಿದೆ. ಪ್ರಕರಣದ ತನಿಖಾಧಿಕಾರಿಯೂ ಆಗಿರುವ ಸೋಮವಾರಪೇಟೆ ಠಾಣಾಧಿಕಾರಿ ಎಂ. ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ ಅವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು,

ಇಂದು ಸೋಮವಾರಪೇಟೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿದ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಪೊಲೀಸ್ ಇಲಾಖೆಗೂ ತಲೆನೋವಾಗಿ ಪರಿಣಮಿಸಿದ್ದ ಆರೋಪಿಗಳ ಬಂಧನ ಕಾರ್ಯದ ಕಾರ್ಯಾಚರಣೆ ಡಿವೈಎಸ್‍ಪಿ ಟಿ.ಕುಮಾರ್ ಮಾರ್ಗದರ್ಶನದಲ್ಲಿ ನಡೆದಿದ್ದು, ಸಿಬ್ಬಂದಿಗಳಾದ ಸಂದೇಶ್, ಪ್ರವೀಣ್, ಜಗದೀಶ್, ಮಹೇಂದ್ರ, ಶಿವು ಸೇರಿದಂತೆ ಇತರರು ಭಾಗವಹಿಸಿದ್ದರು.

ಗಡುವು ನೀಡಿದ್ದ ಸಂಘಟನೆಗಳು: ಮೋಹನ್ ಮೇಲಿನ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿ ಹಿಂದೂ ಜಾಗರಣಾ ವೇದಿಕೆಯ ಆಶ್ರಯದಲ್ಲಿ ತಾ.22 ರಂದು ಸೋಮವಾರಪೇಟೆಯಲ್ಲಿ ಪ್ರತಿಭಟನೆ ನಡೆಸಿದ್ದ ಹಿಂದೂಪರ ಸಂಘಟನೆಗಳ ಮುಖಂಡರು ಮುಂದಿನ 48 ಗಂಟೆಗಳ ಒಳಗೆ ಪ್ರಮುಖ ಆರೋಪಿ ಕರೀಂ ಬೇಗ್‍ನನ್ನು ಬಂಧಿಸಬೇಕು. ತಪ್ಪಿದಲ್ಲಿ ಕೊಡಗು ಜಿಲ್ಲಾ ಬಂದ್‍ಗೆ ಕರೆ ನೀಡಲಾಗುವದು ಎಂದು ಎಚ್ಚರಿಸಿದ್ದವು. ಪ್ರತಿಭಟನೆ ನಡೆಸಿದ 2 ದಿನದಲ್ಲೇ ಆರೋಪಿಯನ್ನು ಬಂಧಿಸುವ ಮೂಲಕ ಪೊಲೀಸ್ ಇಲಾಖೆ ಕಾರ್ಯದಕ್ಷತೆ ತೋರಿದೆ.

ಹಲವು ವಿದ್ಯಮಾನಗಳಿಗೆ ಕಾರಣ: ಘಟನೆ ನಂತರ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದರಿಂದ ಸೋಮವಾರಪೇಟೆಯಲ್ಲಿ ಹಲವು ವಿದ್ಯಮಾನಗಳು ನಡೆಯಲು ಕಾರಣವಾದವು. ಆರೋಪಿಯ ಬಂಧನಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಇಲ್ಲಿನ ತಾಲೂಕು ಕಚೇರಿ ಎದುರು ಯುವಕನ ಮೇಲೆ ಹಲ್ಲೆ ನಡೆದ ಸಂದರ್ಭ ಬಂದೋಬಸ್ತ್‍ನಲ್ಲಿದ್ದ ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ ಅವರು ತಮ್ಮ ರಿವಾಲ್ವರ್ ಪ್ರದರ್ಶಿಸಿದ ಘಟನೆಯೂ ನಡೆದುಹೋಯಿತು.

ಅದೇ ದಿನ ನಗರದಲ್ಲಿ ವರ್ತಕರಾಗಿರುವ ಇಬ್ರಾಹಿಂ ಮತ್ತು ಅಬ್ದುಲ್ ಎಂಬವರುಗಳ ಮೇಲೆ ಹಲ್ಲೆ ನಡೆಯಿತು. ಅದೇ ದಿನ ರಾತ್ರಿ ಐಗೂರು ಗ್ರಾಮದ ಮಸೀದಿಯ ಮೇಲೆ ಕಲ್ಲು ತೂರಾಟ, ಈರ್ವರ ಮೇಲೆ ಹಲ್ಲೆ, ಕಾರಿನ ಮೇಲೆ ಕಲ್ಲು ತೂರಾಟ ನಡೆಯಿತು. ತಾ 23ರಂದು ಬಿಜೆಪಿ ಕಾರ್ಯಕರ್ತ, ಮಸಗೋಡು ಗ್ರಾಮದ ಕೊಮಾರಿ ಸತೀಶ್ ಅವರ ಮೇಲೆ ಅಪರಿಚಿತರಿಂದ ಹಲ್ಲೆ ನಡೆಯಿತು. ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದಂತೆ ಮೈಕೊಡವಿ ಮೇಲೆದ್ದ ರಾಜಕೀಯ ಪಕ್ಷಗಳು ಒಂದರ ಹಿಂದೆ ಮತ್ತೊಂದರಂತೆ ಪತ್ರಿಕಾಗೋಷ್ಠಿ ನಡೆಸಿ ಆರೋಪ-ಪ್ರತ್ಯಾರೋಪ ಮಾಡಿದವು.

ಒಟ್ಟಿನಲ್ಲಿ ಘಟನೆ ನಡೆದ ದಿನದಂದೇ ಆರೋಪಿ ಕರೀಂ ಬೇಗ್‍ನ ಬಂಧನವಾಗಿದಿದ್ದರೆ ಇಷ್ಟೆಲ್ಲಾ ಘಟನಾವಳಿಗಳು ನಡೆಯುತ್ತಿರಲಿಲ್ಲ. ಸೋಮವಾರಪೇಟೆಯಲ್ಲಿ ಪ್ರಕ್ಷುಬ್ಧ ವಾತಾವರಣವೂ ನಿರ್ಮಾಣ ವಾಗುತ್ತಿರಲಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.