ಮಡಿಕೇರಿ, ಜೂ. 23: ದಿನವಿಡೀ ಜಿನುಗುಡುತ್ತಿದ್ದ ಮಳೆ.., ಎಂದೆಂದೂ ಕಾಣದ ಚಳಿಯ ವಾತಾವರಣ.., ಎಲ್ಲರೂ ಮಳೆಯಿಂದ, ಚಳಿಯಿಂದ ರಕ್ಷಣೆ ಪಡೆಯಲು ಹವಣಿಸುತ್ತಿದ್ದರೆ, ಯುವಕನೋರ್ವ ನಡುರಸ್ತೆಯಲ್ಲಿ ಸುರಿವ ಮಳೆಯಲ್ಲಿ ತನ್ನ ಬೈಕ್‍ನಲ್ಲಿ ಅತ್ತಿಂದಿತ್ತ ಚಲಿಸುವ ವಾಹನಗಳ ಎದುರು ನಿಲ್ಲಿಸಿ ಚೆಲ್ಲಾಟವಾಡುತ್ತಿದ್ದ.., ಈತನ ರಂಪಾಟದಿಂದಾಗಿ ಕೆಲಕಾಲ ‘ ಟ್ರಾಫಿಕ್ ಜಾಂ’ ಆಗಿತ್ತಾದರೂ., ಪೊಲೀಸರು ಸಾವಧಾನವಾಗಿಯೇ ಈತನನ್ನು ಬದಿಗೆ ಕಳುಹಿಸುವ ಪ್ರಯತ್ನ ಮಾಡುತ್ತಿದ್ದರೂ, ಅಷ್ಟಕ್ಕೂ ಈತನ ಪ್ರತಿಭಟನೆ ರಂಪಾಟ ಪೊಲೀಸರ ವಿರುದ್ಧವೇ ಆಗಿತ್ತು..!
ಕೆಲವರು ತನ್ನ ಮೇಲೆ ಹಲ್ಲೆ ಮಾಡಿದ್ದು, ದೂರು ನೀಡಲು ತೆರಳಿದ ಸಂದರ್ಭ ಪೊಲೀಸರೂ ಕೂಡ ದೌರ್ಜನ್ಯವೆಸಗಿದ್ದು, ಇದರಿಂದ ಮನನೊಂದು ‘ದಯಾಮರಣ ದಯಪಾಲಿಸುವಂತೆ ಮರಣ ಪತ್ರ ಬರೆದಿಟ್ಟು, ಪೊಲೀಸರ ವಿರುದ್ಧ ಪ್ರತಿಭಟಿಸುತ್ತಿರುವ ಗೌಳಿಬೀದಿಯ ಯುವಕನೋರ್ವರ ಪ್ರತಿಭಟನೆಯ ಪರಿ ಇದು..!
2001ರಲ್ಲಿ ಗೌಳಿಬೀದಿಯ ದಸರಾ ಮಂಟಪಕ್ಕೆ ಕಲಾಕೃತಿ ಮಾಡಿದ ಹಣ ನೀಡದೆ ಜೀವ ಬೆದರಿಕೆ ಒಡ್ಡುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಣ ನೀಡಿಲ್ಲ. ಅಲ್ಲದೆ, ದಸರಾ ಸಮಿತಿಯ ಯುವಕರು ಹಲ್ಲೆ ಮಾಡಿದ್ದಾರೆ. ಠಾಣಾಧಿಕಾರಿ ಕೂಡ ಕಿರುಕುಳ ನೀಡುತ್ತಿದ್ದಾರೆ. ಸಿಗರೇಟ್ ಸೇದಿದಕ್ಕೆ ಕೆಲವು ಪೊಲೀಸ್ ಸಿಬ್ಬಂದಿಗಳು ಮೊಬೈಲ್ ಕಿತ್ತುಕೊಂಡು ತೊಂದರೆ ನೀಡುತ್ತಿದ್ದಾರೆ. ಒಟ್ಟು 12 ಮಂದಿಯಿಂದ ನನಗೆ ನೋವುಂಟಾಗಿದ್ದು, ಒಂದೋ ಇವರೊಂದಿಗೆ ಹೊಡೆದಾಡಿ ವೀರ ಮರಣ ಹೊಂದುತ್ತೇನೆ. ಇಲ್ಲವಾದಲ್ಲಿ ಜೂನ್ 17 ರಂದು ಜೀವಂತ ಸಮಾದಿ ಮಾಡಿಕೊಳ್ಳುತ್ತೇನೆ ಎಂದು ಮರಣ ಪತ್ರ ಬರೆದಿಟ್ಟು, ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದ.
ಇಂದು ದಿಢೀರನೆ ಬೈಕ್‍ನಲ್ಲಿ ಆಗಮಿಸಿ ಮುತ್ತಣ್ಣ ವೃತ್ತದಲ್ಲಿ ಪೊಲೀಸ್ ವಾಹನ ಕಂಡೊಡನೆ ಬೈಕನ್ನು ಅಡ್ಡ ನಿಲ್ಲಿಸುತ್ತಿದ್ದ.., ಒಂದಿಷ್ಟು ಚಾಕಲೇಟನ್ನು ತಂದು ರಸ್ತೆಗೆ ಸುರಿದು ಪ್ರತಿಭಟಿಸಿದ, ನಂತರ ಯಾವದೇ ವಾಹನ ಬಂದರೂ ಬೈಕನ್ನು ಅಡ್ಡ ನಿಲ್ಲಿಸಿ ರಂಪಾಟ ಮಾಡಿದ, ಈತನ ರಂಪಾಟದಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡು ‘ಟ್ರಾಫಿಕ್ ಜಾಂ’ ಆಗಿತ್ತು.
ಈತನ ಬಗ್ಗೆ ತಿಳಿದಿರುವ ಪೊಲೀಸರು ನಗುತ್ತಲೇ ಸಾವಧಾನದಿಂದ ಮಾತನಾಡಿಸಿ, ಅಲ್ಲಿಂದ ಕಳುಹಿಸುವಲ್ಲಿ ಯಶಸ್ವಿಯಾದರು. ವಿಚಿತ್ರ ವರ್ತನೆಯಿಂದ ವಾಹನ ಚಾಲಕರು, ಸಾರ್ವಜನಿಕರು ತಬ್ಬಿಬ್ಬಾಗಿದಂತೂ ನಿಜ..!
- ಸಂತೋಷ್