ಮಡಿಕೇರಿ, ಜೂ. 17: ಜಿಲ್ಲೆಯಲ್ಲಿ ಅತಿಯಾಗಿ ಬೆಳೆಯುತ್ತಿರುವ ಹೋಂಸ್ಟೇ ಬೆಳವಣಿಗೆ ಕುರಿತು ವಿಮರ್ಶೆ ಮಾಡಲು ತಾ. 18ರಂದು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ ಅವರು ಆಗಮಿಸುತ್ತಿದ್ದಾರೆ.

ಅನೊಂದಾಯಿತ ಹೋಂ ಸ್ಟೇಗಳಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೂರುಗಳು ಅಧಿಕಗೊಳ್ಳುತ್ತಿದ್ದು, ಹೋಂ ಸ್ಟೇಗಳಿಗೆ ಅನುಮೋದನೆ ನೀಡುವ ಮತ್ತು ಇತರ ವಿಚಾರಗಳ ಕುರಿತು ಖತ್ರಿ ಜಿಲ್ಲಾಡಳಿತ ದೊಂದಿಗೆ ಚರ್ಚಿಸಲಿದ್ದಾರೆ.

ಈಗಾಗಲೇ ರಾಜ್ಯದ ಹೋಂ ಸ್ಟೇಗಳಿಗೆ ಖಾಸಗಿ ಸಂಸ್ಥೆಗಳ ಮೂಲಕ ರೇಟಿಂಗ್ ನೀಡುತ್ತಿರುವ ಕುರಿತೂ ಸಭೆಯಲ್ಲಿ ಅವಲೋಕಿಸಲಿದ್ದು, ಈಗಾಗಲೇ ಅನುಮೋದನೆಗೊಂಡಿರುವ ಹೋಂ ಸ್ಟೇಗಳ ಪ್ರಗತಿಯನ್ನು ತುಲನೆ ಮಾಡಲಾಗುತ್ತದೆ.

ರಾಜ್ಯದಲ್ಲಿ ಹೋಂ ಸ್ಟೇ ರೇಟಿಂಗ್ ಮಾಡಲು ಬೆಂಗಳೂರು ಬ್ರಿಕ್‍ವರ್ಕ್ ರೇಟಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿ, ಕ್ರೆಡಿಟ್ ಅನಾಲಿಸಿಸ್ ಅಂಡ್ ರೀಸರ್ಚ್ ಲಿಮಿಟೆಡ್, ಇಂಡಿಯಾ ರೇಟಿಂಗ್ಸ್ ಮತ್ತು ರೀಸರ್ಚ್ ಪ್ರೈವೇಟ್ ಲಿಮಿಟೆಡ್ ಹಾಗೂ ತಮಿಳುನಾಡಿನ ಸ್ಮೇರಾ ರೇಟಿಂಗ್ಸ್ ಲಿಮಿಟೆಡ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ತಾ. 18ರ ಸಭೆಯಲ್ಲಿ ಕೊಡಗು ಹಾಗೂ ಚಿಕ್ಕಮಗಳೂರಿನ ಹೋಂಸ್ಟೇ ಸಂಘಗಳ ಪದಾಧಿಕಾರಿಗಳೂ ಹಾಜರಿರುತ್ತಾರೆ.