ಶನಿವಾರಸಂತೆ, ಜೂ. 23: ಕೊಡ್ಲಿಪೇಟೆಯ ಹೊಸ ಮುನ್ಸಿಪಾಲಿಟಿಯ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿ ( ಕೆ.ಎ. 12. 2465) ಯ ಹಿಂಬದಿಗೆ ಮೋಟಾರ್ ಸೈಕಲ್ (ಕೆ.ಎ. 04 ಇ.ಪಿ. 9918) ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಪ್ರಕರಣ ಸಂಭವಿಸಿದೆ.

ಯಸಳೂರು ಹೋಬಳಿಯ ದೊಡ್ನಳ್ಳಿ ಗ್ರಾಮದ ರಾಮೇಗೌಡರ ಪುತ್ರ ಅವಿವಾಹಿತ ನಂದನ (29) ತಾ. 22ರ ರಾತ್ರಿ ತನ್ನ ಸ್ನೇಹಿತ ಅವರಗೆರೆಯ ರೇವಣ್ಣ ಅವರನ್ನು ಮೋಟಾರ್ ಸೈಕಲ್‍ನಲ್ಲಿ ಕೂರಿಸಿ ಕೊಂಡು ಕೊಡ್ಲಿಪೇಟೆಗೆ ಕೆಲಸದ ನಿಮಿತ್ತ ಬಂದು ವಾಪಾಸ್ಸು ಊರಿಗೆ ಹೋಗುತ್ತಿರುವಾಗ ಕೊಡ್ಲಿಪೇಟೆಯ ಹೊಸಮುನ್ಸಿಪಾಲಿಟಿ ಬಳಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಲಾರಿಯ ಹಿಂಬದಿಗೆ ಡಿಕ್ಕಿಪಡಿಸಲಾಗಿದೆ.

ಬೈಕ್ ಸವಾರರಿಬ್ಬರು ರಸ್ತೆಗೆ ಬಿದ್ದ ಪರಿಣಾಮ ಬೈಕ್ ಸವಾರ ನಂದನ ಮುಖದ ಭಾಗಕ್ಕೆ ಪೆಟ್ಟಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿಯ ಸವಾರ ರೇವಣ್ಣ ಅವರಿಗೆ ಕಾಲು ಮತ್ತು ಶರೀರದ ಭಾಗಕ್ಕೆ ಗಾಯವಾಗಿದ್ದು, ಅವರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಯ ಮಾಲೀಕ ವಸಂತ ಅವರು ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸ್ ಠಾಣೆಯ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಬಿ.ಎಸ್. ಜನಾರ್ಧನ್ ವಿಧಿ 279, 337, ರೀತ್ಯಾ ಪ್ರಕರಣ ದಾಖಲಿಸಿದ್ದಾರೆ