ಸೋಮವಾರಪೇಟೆ, ಜೂ. 20: ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮೊರಾರ್ಜಿ ವಸತಿ ಶಾಲೆ ನಿರ್ಮಾಣಕ್ಕೆ ಬ್ಲಾಕ್ ಕಾಂಗ್ರೆಸ್ ಪ್ರಮುಖರು ಹಾಗೂ ತಹಶೀಲ್ದಾರ್ ಅವರನ್ನು ಒಳಗೊಂಡ ತಂಡ ಸ್ಥಳ ಪರಿಶೀಲನೆ ನಡೆಸಿತು.

ಈ ವ್ಯಾಪ್ತಿಯ ಶಾಂತಳ್ಳಿ, ಬೆಟ್ಟದಳ್ಳಿ, ಹಾನಗಲ್ಲು, ಬೇಳೂರು, ನೇರುಗಳಲೆ, ಗಣಗೂರು, ಗೌಡಳ್ಳಿ, ಐಗೂರು, ಕಿರಗಂದೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವದೇ ವಸತಿ ಶಾಲೆ ಇಲ್ಲದೇ ಇರುವದನ್ನು ಮನಗಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಅವರು ಶಾಂತಳ್ಳಿ ವ್ಯಾಪ್ತಿಯಲ್ಲಿ ವಸತಿ ಶಾಲೆ ನಿರ್ಮಾಣಕ್ಕೆ ಸೂಕ್ತ ಜಾಗವನ್ನು ಗುರುತಿಸುವ ಸಲುವಾಗಿ ತಹಶೀಲ್ದಾರ್ ಶಿವಪ್ಪ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಈ ಭಾಗದಲ್ಲಿ ವಸತಿ ಶಾಲೆ ನಿರ್ಮಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, 5 ಎಕರೆ ಜಾಗವನ್ನು ಗುರುತಿಸುವಂತೆ ಇಲಾಖಾಧಿಕಾರಿ ಗಳು ಸೂಚಿಸಿದ್ದರು. ಅದರಂತೆ ತಹಶೀಲ್ದಾರ್ ಅವರ ಸಮ್ಮುಖದಲ್ಲಿ, ಗ್ರಾಮಸ್ಥರು ಈ ಹಿಂದಿನಿಂದಲೂ ಕಾಯ್ದಿರಿಸಿಕೊಂಡು ಬಂದಿದ್ದ ಶಾಂತಳ್ಳಿ ಗ್ರಾಮದಲ್ಲಿರುವ ಪದವಿಪೂರ್ವ ಕಾಲೇಜಿನ ಸನಿಹದ 5 ಏಕರೆ ಜಾಗವನ್ನು ಗುರುತಿಸ ಲಾಗಿದೆ. ಎಂದು ಕೆ.ಎಂ. ಲೋಕೇಶ್ ಮಾಹಿತಿ ನೀಡಿದರು.

ಈ ಸಂಬಂಧಿತ ವರದಿಯನ್ನು ಸಂಬಂಧಿಸಿದ ಇಲಾಖೆಗೆ ಹಸ್ತಾಂತರಿಸಿ ಆದಷ್ಟು ಶೀಘ್ರವಾಗಿ ವಸತಿ ಶಾಲೆ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಲಾಗುವದು ಎಂದು ಲೋಕೇಶ್ ಹೇಳಿದರು.

ಈ ಸಂದರ್ಭ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಲಿಂಗರಾಜು, ಸದಸ್ಯ ಗಣಪತಿ, ಸರ್ವೆ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.