ಸೋಮವಾರಪೇಟೆ,ಜೂ. 25: ಇಲ್ಲಿಗೆ ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರಿನ ಮನೆಯೊಂದರ ಮೇಲೆ ಕಾಡಾನೆ ಯೊಂದು ಧಾಳಿ ನಡೆಸಿದ್ದು, ಮನೆಯಲ್ಲಿದ್ದ ಮೂವರು ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ನಡೆದಿದೆ.

ಮೊನ್ನೆ ದಿನ ಬೆಳಗಿನ ಜಾವ 3.30ಗಂಟೆಗೆ ಕಾಜೂರಿನ ಚಂದ್ರ ಎಂಬವರ ಮನೆ ಮೇಲೆ ಧಾಳಿ ನಡೆಸಿದ ಆನೆ ಮನೆಯ ಕಿಟಕಿಯನ್ನು ತಿವಿದು ಬೀಳಿಸಿದೆ. ಈ ಸಂದರ್ಭ ಕಿಟಕಿಯ ಸಮೀಪ ಮಲಗಿದ್ದ ಚಂದ್ರ ಅವರನ್ನು ಸೊಂಡಿಲಿನಿಂದ ಎಳೆಯಲು ಪ್ರಯತ್ನಿಸಿದೆ. ಹಠಾತ್ ಧಾಳಿಯಿಂದ ವಿಚಲಿತರಾದ ಅವರು ಕೂಡಲೇ ಪಕ್ಕದ ಕೊಣೆಗೆ ಓಡಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಅಲ್ಲಿಯೇ ನಿಂತಿದ್ದ ಆನೆ ನಂತರ ಸ್ಥಳದಿಂದ ಹೊರಟು ಹೋಗಿದೆ. ಮನೆಯ ಮತ್ತೊಂದು ಕೋಣೆಯಲ್ಲಿ ತಾಯಿ ಲಕ್ಷ್ಮಿ ಹಾಗೂ ಸಹೋದರಿ ಕೂಡ ಮಲಗಿದ್ದು, ಆನೆ ಧಾಳಿಯಿಂದ ಗಾಬರಿಗೊಂಡಿದ್ದಾರೆ.

ಕೂಲಿ ಕಾರ್ಮಿಕರಾಗಿರುವ ಚಂದ್ರ ಕುಟುಂಬ ತೀರಾ ಬಡತನದಲ್ಲಿ ಜೀವನ ಸಾಗಿಸುತ್ತಿದೆ. ಹಳೆಯ ಕಾಲದ ಮಣ್ಣಿನ ಗೋಡೆಯ ಮನೆಯಲ್ಲಿ ವಾಸವಾಗಿದ್ದ ಕುಟುಂಬಕ್ಕೆ ಕಾಡಾನೆ ಧಾಳಿಯಿಂದಾಗಿ ಇದ್ದ ಮನೆಯೂ ಬೀಳುವ ಹಂತಕ್ಕೆ ತಲುಪಿ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಐಗೂರು ಗ್ರಾಮ ಪಂಚಾಯತಿ ಪಿಡಿಓ ರಂಗಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಒಂದು ತಿಂಗಳ ಒಳಗೆ ಮನೆ ನಿರ್ಮಿಸಲು ಪಂಚಾಯಿತಿ ವತಿಯಿಂದ ನೆರವು ನೀಡಲಾಗುವದು ಎಂದು ಭರವಸೆ ನೀಡಿದ್ದಾರೆ.

ಕಾಡಾನೆಗಳ ಹಿಂಡು ಮನೆಯ ಸಮೀಪದಲ್ಲಿ ರಾತ್ರಿ ವೇಳೆ ಸಂಚರಿಸುತ್ತಿತ್ತು. ಮನೆಯಲ್ಲಿ ತಾಯಿ, ತಂಗಿ ಸೇರಿದಂತೆ ಮೂವರು ಮನೆಯಲ್ಲಿ ಮಲಗಿದ್ದೆವು. ಬೆಳಗಿನ ಜಾವ ಒಂದು ಆನೆ ಮಾತ್ರ ಗುಂಪಿನಿಂದ ಹೊರಬಂದು ಮನೆಯ ಮೇಲೆ ಧಾಳಿ ನಡೆಸಿತು. ಕಿಟಕಿಯ ಸಮೀಪ ಯಾರೋ ಗುದ್ದುತ್ತಿರುವ ಸದ್ದು ಕೇಳಿಸಿತು. ಕೆಲವೇ ಕ್ಷಣಗಳಲ್ಲಿ ಕಿಟಕಿ ಉರುಳಿ ಬಿತ್ತು.

ನೋಡ ನೋಡುತ್ತಿದ್ದಂತೆ ಆನೆ ಸೊಂಡಿಲು ಮನೆಯೊಳಗೆ ಬಂದಂತಾಯಿತು. ಒಂದು ಕ್ಷಣ ಏನು ಮಾಡುವದೆಂದು ತೋಚಲಿಲ್ಲ. ಒಂದು ವೇಳೆ ಟಾರ್ಚ್‍ನಿಂದ ನೋಡಲು ಹೋಗಿದ್ದರೆ ನನ್ನನ್ನು ಹಾಗು ಕುಟುಂಬದ ಸದಸ್ಯರನ್ನು ಬಲಿ ತೆಗೆದುಕೊಳ್ಳುತ್ತಿತ್ತು ಎಂದು ಚಂದ್ರ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಪ್ರತಿ ನಿತ್ಯ ಜೀವ ಕೈಯಲ್ಲಿಡಿದು ಕೊಂಡು ಬದುಕಬೇಕಾದ ಅನಿವಾರ್ಯತೆ ಇದೆ. ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಆನೆ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ಚಂದ್ರ ಸೇರಿದಂತೆ ಅಕ್ಕಪಕ್ಕದ ನಿವಾಸಿಗಳು ತಿಳಿಸಿದ್ದು, ಪರಿಹಾರ ಕೋರಿ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾಡಾನೆ ಧಾಳಿಗೆ ಒಳಗಾದ ಚಂದ್ರ ಅವರ ಮನೆಯ ಸ್ಥಳ ಪರಿಶೀಲನೆ ಮಾಡಿದ್ದು, ಮುಂದಿನ ವಸತಿ ಯೋಜನೆಯಡಿ ಪಂಚಾಯಿತಿ ಸಭೆಯಲ್ಲಿ ಅನುಮೋದನೆ ಪಡೆದು ಮನೆ ನಿರ್ಮಿಸಲು ವ್ಯವಸ್ಥೆ ಮಾಡಿಕೊಡಲಾಗುವದು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ ತಿಳಿಸಿದ್ದಾರೆ.