ಮಡಿಕೇರಿ, ಜೂ. 5: ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ವ್ಯಕ್ತಿಗಳ ಸಂಬಂಧಿಕರಿಂದ ವೃದ್ಧೆ ಮಹಿಳೆ ಯೊಬ್ಬರಿಗೆ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿ ಬಂದಿದೆ. ಕಾಲೂರು ಗ್ರಾಮದಲ್ಲಿ ಇತ್ತೀಚೆಗೆ ವ್ಯಕ್ತಿಯೋರ್ವರು ಹತ್ಯೆ ಗೀಡಾಗಿದ್ದಾರೆ. ಇದೀಗ ಹತ್ಯೆಗೀಡಾದ ವ್ಯಕ್ತಿಯ ತಾಯಿಯನ್ನು ರಾತ್ರಿ ವೇಳೆ ಬೆದರಿಸುತ್ತಿರುವ ಆರೋಪ ಕೇಳಿ ಬಂದಿದೆ.

ಆರೋಪಿಗಳ ಸಂಬಂಧಿಕರು ರಾತ್ರಿ ಹೊತ್ತಿನಲ್ಲಿ ಮನೆ ಸುತ್ತಲು ಸುಳಿದಾಡುವ ಮೂಲಕ ಹೆದರಿಸುತ್ತಿದ್ದಾರೆ. ನನಗೆ ಮನೆಯಲ್ಲಿ ಇರಲಾಗುತ್ತಿಲ್ಲ ಎಂದು ಕೊಲೆಯಾದ ಚೆನ್ನಪಂಡ ಕಾಶಿ ಚರ್ಮಣ ತಾಯಿ ಚೆನ್ನಪಂಡ ಕಾಮವ್ವ (68) ಅಸಹಾಯಕತೆ ತೋಡಿಕೊಂಡಿದ್ದಾರೆ.

ಮೇ 7 ರಂದು ರಾತ್ರಿ ನಡೆದಿದ್ದ ಹಲ್ಲೆಯಲ್ಲಿ ಗಾಯಗೊಂಡಿದ್ದ ಚೆನ್ನಪಂಡ ಕಾಶಿ ಚರ್ಮಣ ಮೇ 13 ರಂದು ಜಿಲ್ಲಾಸ್ಪತ್ರೆಯಲ್ಲಿ ಮೃತ ಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೂರು ನಿವಾಸಿಗಳಾದ ಕೊರಿಯನ ಸತೀಶ್, ಸಿದ್ದಂಡ ಪಟ್ಟು ಎಂಬವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಮತ್ತೊಬ್ಬ ಆರೋಪಿ ಮನು ತಲೆಮರೆಸಿಕೊಂಡಿದ್ದಾರೆ.

ನಿತ್ಯ ರಾತ್ರಿ ಹೊತ್ತಿನಲ್ಲಿ ಮನೆ ಸುತ್ತಮುತ್ತಲು ಕೊಲೆ ಆರೋಪಿಗಳ ಬೆಂಬಲಿಗರು ಸುಳಿದಾಡುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಮನೆ ಸುತ್ತಮುತ್ತಲು ಬಂಧಿತರ ಸಂಬಂಧಿಕರು ಸಂಚರಿಸುತ್ತಿರುವದನ್ನು ಗಮನಿಸಿದ್ದೇನೆ. ರಾತ್ರಿ ಮನೆಯಲ್ಲಿ ಇರಲು ಭಯ ವಾಗುತ್ತಿರುವದರಿಂದ ಸಹೋದರಿ ಶಾಂತಿ ಅವರನ್ನು ತನ್ನ ಜತೆಯಲ್ಲಿ ಇರಲು ಕರೆಸಿಕೊಂಡಿರುವದಾಗಿ ಕಾಮವ್ವ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪುತ್ರನ ಹತ್ಯೆಯಾದ ಬಳಿಕ ತಾನು ಮನೆಯಿಂದ ಹೊರ ಹೋಗುತ್ತಿಲ್ಲ. ಮಗನ ಹತ್ಯೆಗೆ ಕಾರಣಕರ್ತರಾಗಿರುವ ತನ್ನ ಅಕ್ಕಪಕ್ಕದ ನಿವಾಸಿಗಳನ್ನು ನೋಡಲು ಮನಸ್ಸಿಗೆ ನೋವಾಗುತ್ತದೆ. ಅದಕ್ಕಾಗಿ ಮನೆ ಒಳಗೇ ಇರುತ್ತೇನೆ. ಹೀಗಿದ್ದರೂ, ರಾತ್ರಿ ಹೊತ್ತಿನಲ್ಲಿ ಮನೆ ಸುತ್ತಮುತ್ತ ಸುಳಿದಾಡುತ್ತಿರುವದರಿಂದ ಭಯದಲ್ಲಿ ದಿನ ಕಳೆಯುವಂತಾಗಿದೆ ಎಂದು ಕಾಮವ್ವ ಆತಂಕ ವ್ಯಕ್ತಪಡಿಸಿದ್ದಾರೆ.

ಕಾಲೂರು ಗ್ರಾಮದಲ್ಲಿರುವ ತನ್ನ ಅಜ್ಜಿ ಕಾಮವ್ವಗೆ ಪೊಲೀಸರು ತಕ್ಷಣ ಸೂಕ್ತ ರಕ್ಷಣೆ ಒದಗಿಸಬೇಕು. ಅಕ್ಕಪಕ್ಕದ ವ್ಯಕ್ತಿಗಳು ರಾತ್ರಿವೇಳೆ ಭಯ ಹುಟ್ಟಿಸುತ್ತಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರಿಗೆ ದೂರು ನೀಡಲಾಗುವದು. ಅದಕ್ಕೂ ಮುನ್ನವೇ ಪೊಲೀಸರು ರಕ್ಷಣೆ ನೀಡಬೇಕು ಎಂದು ಮೊಮ್ಮಗ ಐಮುಡಿಯಂಡ ಪವನ್ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.