ಶನಿವಾರಸಂತೆ, ಜೂ. 26: ಶನಿವಾರಸಂತೆ ಪೊಲೀಸ್ ಠಾಣೆಗೆ ದಿನನಿತ್ಯ ಗಂಡ-ಹೆಂಡತಿ ಜಗಳ, ಅಪಘಾತಗಳು, ಹೊಡೆದಾಟ, ಜಾಗದ ಗಲಾಟೆ ಇನ್ನಿತರ ದೂರುಗಳು ಬರುವದು ಸಾಮಾನ್ಯ. ಆದರೆ ಇವನ್ನೆಲ್ಲಾ ಪರಿಹರಿಸಬೇಕಾದ ಠಾಣಾಧಿಕಾರಿಯ ಕುರ್ಚಿಯೇ ಖಾಲಿಯಾಗಿ 20 ದಿನಗಳಾಗಿವೆ!

ಶನಿವಾರಸಂತೆ ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಆಗಿ ಎರಡು ವರ್ಷಗಳವರೆಗೆ ಕರ್ತವ್ಯ ನಿರ್ವಹಿಸಿದ್ದ ಎಸ್.ಎಸ್. ರವಿಕಿರಣ್ ವರ್ಗವಾಗಿ ಕುಟ್ಟ ಪೊಲೀಸ್ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡು 20 ದಿನಗಳಾಯಿತು. ಆದರೆ ಇಂದಿನವರೆಗೆ ಶನಿವಾರ ಸಂತೆಗೆ ಠಾಣಾಧಿಕಾರಿಯನ್ನಾಗಿ ಯಾರನ್ನೂ ನೇಮಕಾತಿ ಮಾಡಿಲ್ಲ. ಶನಿವಾರಸಂತೆ ಠಾಣೆಯ ಪೊಲೀಸರನ್ನು ಮೇಲಧಿಕಾರಿಗಳು ಸೋಮವಾರಪೇಟೆಯಲ್ಲಿ ನಡೆದ ಗುಂಪು ಘರ್ಷಣೆಗಳಿಗೆ ನಿಯೋಜಿಸಿದ್ದು, ಶನಿವಾರಸಂತೆ ಯಲ್ಲಿ ದೈನಂದಿನ ಕರ್ತವ್ಯಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ತಿಳಿದು ಬಂದಿದೆ.