ಶನಿವಾರಸಂತೆ, ಜೂ. 26: ಹಂಡ್ಲಿ ಪಂಚಾಯಿತಿ ವ್ಯಾಪ್ತಿಯ ನಾಕಲುಗೋಡು - ಕಣಗಾಲು ಗ್ರಾಮದಲ್ಲಿ ಗ್ರಾಮಸ್ಥರು ಸೇರಿ ಶ್ರೀ ವಿನಾಯಕ ದೇವಸ್ಥಾನ ನಿರ್ಮಾಣ ಮಾಡಲು ಭೂಮಿ ಪೂಜೆ ನೆರವೇರಿಸಿದರು. ಭೂಮಿ ಪೂಜೆಯಲ್ಲಿ ಭಾಗಿಯಾದ ತಾ.ಪಂ. ಸದಸ್ಯ ಬಿ.ಎಸ್. ಅನಂತ ಕುಮಾರ್ ಮಾತನಾಡಿ, ಊರು ಒಳ್ಳೆಯದಾಗಬೇಕಾದರೆ ಒಳ್ಳೆಯ ಮನಸ್ಸಿರಬೇಕು. ಗ್ರಾಮಸ್ಥರಲ್ಲಿ ಆತ್ಮಸ್ಥೈರ್ಯ, ಒಗ್ಗಟ್ಟಿರಬೇಕು. ದೇವಾಲಯ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ತಾ.ಪಂ. ಸದಸ್ಯ ಕುಶಾಲಪ್ಪ ಮಾತನಾಡಿ, ದೇವಸ್ಥಾನ ಇಲ್ಲದ ಊರು ನಾಕಲಗೋಡಿಗೆ ಇಂದು ಶುಭ ದಿನವಾಗಿದೆ. ಇದರೊಂದಿಗೆ ಸಮುದಾಯ ಭವನಕ್ಕೆ ಸರಕಾರದಿಂದ ಅನುದಾನ ಪಡೆಯಲು ಪ್ರಯತ್ನಿಸುತ್ತೇನೆ ಎಂದರು. ಹಂಡ್ಲಿ ಗ್ರಾ.ಪಂ. ಅಧ್ಯಕ್ಷ ಸಂದೀಪ್, ಸದಸ್ಯೆ ವಾಣಿ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಸವರಾಜು ಮಾತನಾಡಿದರು.
ಸಮಾರಂಭದಲ್ಲಿ ಹಂಡ್ಲಿ ಪಂಚಾಯಿತಿ ಸದಸ್ಯರುಗಳಾದ ಬೆಳ್ಳಿಯಪ್ಪ, ಉಮೇಶ್, ಶಿವಮ್ಮ, ಶಿವಕುಮಾರ್, ಗ್ರಾಮಸ್ಥರಾದ ಉರಿ ಬಸವಯ್ಯ, ನಂಜುಂಡ, ಕಾಮಾಕ್ಷಿ, ಲೀಲಾವತಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಕ್ಷಕ ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಶಿವಾನಂದ ಪ್ರಾರ್ಥಿಸಿ, ವಂದಿಸಿದರು.