(ಉಜ್ವಲ್ ರಂಜಿತ್/ ಪರಮೇಶ್)
ಮಡಿಕೇರಿ, ಜೂ. 22: ಸರ್ವರ ಸಹಕಾರ ಪಡೆದು ಕೊಡಗಿನಲ್ಲಿ ಉತ್ತಮ ಕೆಲಸ ಮಾಡುತ್ತೇನೆ ಎಂದು ಕೊಡಗು ಜಿಲ್ಲಾ ನೂತನ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಇಂಗಿತ ವ್ಯಕ್ತಪಡಿಸಿದರು.
ರಾಜ್ಯ ಸಚಿವ ಸಂಪುಟ ಸರ್ಜರಿ ಬಳಿಕ ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಆಯ್ಕೆ ಆದ್ದರಿಂದ ಕೊಡಗು ಉಸ್ತುವಾರಿ ಸಚಿವರ ಸ್ಥಾನ ತೆರವಾಗಿತ್ತು. ಆ ಸ್ಥಾನಕ್ಕೆ ಕೊಡಗಿನ ಐದನೇ ಉಸ್ತುವಾರಿ ಸಚಿವರಾಗಿ ಇಂದು ಯೋಜನೆ ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾಗಿರುವ ಎಂ.ಆರ್. ಸೀತಾರಾಂ ಅವರನ್ನು ಸರ್ಕಾರ ನೇಮಕ ಮಾಡಿದೆ. ‘ಶಕ್ತಿ’ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸೀತಾರಾಂ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕೊಡಗಿನ ಬಗ್ಗೆ ತನಗೆ ಅರಿವಿದೆ. ವಿಶ್ರಾಂತಿಗಾಗಿ ಕುಟುಂಬ ಸಹಿತ ತಾನು ಕೊಡಗಿಗೆ ಪ್ರತಿವರ್ಷಕ್ಕೊಮ್ಮೆ ಬರುತ್ತಿರುತ್ತೇನೆ. ಕೊಡಗಿನ ಬಗ್ಗೆ ಒಲವಿದ್ದು, ಕೊಡಗು ನನ್ನ ಮೆಚ್ಚಿನ ತಾಣ ಎಂದು ಸೀತಾರಾಂ ಹೇಳಿದರು.
ಸದ್ಯದಲ್ಲಿಯೇ ಕೊಡಗಿಗೆ ಭೇಟಿ ನೀಡಲಿದ್ದೇನೆ. ಭೇಟಿ ನೀಡಿ ಕೊಡಗಿನಲ್ಲಿ ಸಮಸ್ಯೆಗಳ ಬಗ್ಗೆ ಬೇಕು ಬೇಡಿಕೆಗಳ ಬಗ್ಗೆ ಅವಲೋಕನ ಮಾಡುತ್ತೇನೆ. ಸ್ಥಳೀಯ ನಾಯಕರಿಂದಲೂ ಮಾಹಿತಿ ಪಡೆದುಕೊಳ್ಳುವದಲ್ಲದೆ ಈ ಹಿಂದಿನ ಉಸ್ತುವಾರಿ ಸಚಿವರಾದ ದಿನೇಶ್ಗುಂಡೂರಾವ್ ಅವರೊಂದಿಗೂ ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಂಡು ಕೊಡಗಿಗಾಗಿ ಉತ್ತಮ ಕೆಲಸ ಮಾಡುತ್ತೇನೆ. ಅಗತ್ಯವಾಗಿ ನಡೆಯಬೇಕಾದ ಕೆಲಸ ಕಾರ್ಯಗಳನ್ನು ಮಾಡುವಲ್ಲಿ ಮೊದಲ ಆದ್ಯತೆ ನೀಡುತ್ತೇನೆ ಎಂದು ನೂತನ ಸಚಿವರು ಅಭಿಪ್ರಾಯಿಸಿದರು.
ಕೊಡಗು ಈ ರಾಜ್ಯಕ್ಕೆ ಗುಂಡೂರಾವ್ರಂತಹ ಮಖ್ಯಮಂತ್ರಿಯನ್ನು ಕೊಟ್ಟ ಜಿಲ್ಲೆ. ಅಭಿವೃದ್ಧಿ ಜೊತೆಗೆ ಕೊಡಗಿನಲ್ಲಿ ಮುಖಂಡರೊಂದಿಗೆ ಚರ್ಚಿಸಿ ಪಕ್ಷ ಸಂಘಟನೆಗೂ ಒತ್ತು ನೀಡುತ್ತೇನೆ ಎಂದು ಸೀತಾರಾಂ ಹೇಳಿದರು.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಂಸ್ಥೆಗಳ ಪ್ರವರ್ತಕರಾಗಿರುವ ಎಂ.ಎಸ್. ರಾಮಯ್ಯ ಅವರ ಪುತ್ರರಾದ ಎಂ.ಆರ್. ಸೀತಾರಾಂ ಅವರು ಈ ಹಿಂದೆ ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಕೆಲಸ ಮಾಡಿದ್ದರು. ಪ್ರಸ್ತುತ ವಿಧಾನ ಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆ ಆಗಿದ್ದರು. ಇದೇ ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದ್ದಾರೆ.