ಕುಶಾಲನಗರ, ಮೇ 12: ಕರ್ನಾಟಕ ರಾಜ್ಯ ಸಹಕಾರಿ ಮಾರುಕಟ್ಟೆ ಮಹಾ ಮಂಡಳದಿಂದ ವಂಚನೆ ನಡೆದಿರುವದಾಗಿ ಆರೋಪಿಸಿ ವೀರಾಜಪೇಟೆ ತಾಲೂಕಿನ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು ಕುಶಾಲನಗರದಲ್ಲಿ ಮಹಾ ಮಂಡಳ ಶಾಖಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಗೊಬ್ಬರ ಖರೀದಿ ವ್ಯವಹಾರದಲ್ಲಿ ತಮ್ಮ ಶಾಖೆಗೆ 3 ಲಕ್ಷದ 98 ಸಾವಿರ ರೂ.ಗಳಿಗೂ ಅಧಿಕ ವ್ಯತ್ಯಾಸ ಉಂಟುಮಾಡುವದರೊಂದಿಗೆ ಗೊಬ್ಬರ ಸರಬರಾಜು ಮಾಡದೆ ವಂಚಿಸಿರುವದಾಗಿ ಆರೋಪಿಸಿರುವ ಹಾತೂರು ಸಹಕಾರ ಸಂಘದ ಆಡಳಿತ ಮಂಡಳಿ ಪ್ರಮುಖರು ಕಚೇರಿ ಮುಂದೆ ಧರಣಿ ನಡೆಸಿದರು.
ಈ ಬಗ್ಗೆ ಮಾಹಿತಿ ನೀಡಿದ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಂಡ್ ಗಣಪತಿ, ಕಳೆದ 2015 ರಲ್ಲಿ ಮಹಾ ಮಂಡಳಕ್ಕೆ ಹಣ ಪಾವತಿಸಿದ್ದರೂ ತಮ್ಮ ಸಂಘದ ವ್ಯಾಪ್ತಿಯ ರೈತರಿಗೆ ನೀಡಬೇಕಾದ 30 ಟನ್ ಗೊಬ್ಬರ ಸರಬರಾಜು ಮಾಡದೆ ಮಹಾ ಮಂಡಳದ ಅಧಿಕಾರಿಗಳು ವಂಚಿಸಿದ್ದಾರೆ. ಇದಕ್ಕೆ ಹಲವು ಬಾರಿ ಕೋರಿಕೆ ಸಲ್ಲಿಸಿದರೂ ಮನವಿಗೆ ಸ್ಪಂದನ ನೀಡಿಲ್ಲ. ಈ ಬಗ್ಗೆ ಈಗಾಗಲೇ ಮಹಾ ಮಂಡಳದ ಕೇಂದ್ರ ಕಚೇರಿಗೆ ಪತ್ರ ಬರೆದರೂ ಸ್ಪಂದಿಸಿದ ಹಿನ್ನೆಲೆಯಲ್ಲಿ ತಮ್ಮ ಸಂಘದ ಆಡಳಿತ ಮಂಡಳಿ ನ್ಯಾಯಕ್ಕಾಗಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿರುವದಾಗಿ ತಿಳಿಸಿದ್ದಾರೆ.
ಮಹಾ ಮಂಡಳದಲ್ಲಿ ಅಂದಾಜು 18 ಲಕ್ಷ ರೂ.ಗಳ ಹಣ ದುರುಪಯೋಗವಾಗಿರುವ ಬಗ್ಗೆ ತಮಗೆ ಮಾಹಿತಿ ದೊರೆತಿದ್ದು, ಜಿಲ್ಲೆಯಲ್ಲಿ 10 ಸಹಕಾರ ಸಂಘಗಳಿಗೆ ಒಟ್ಟು 17 ಲಕ್ಷದ 27 ಸಾವಿರದ 513 ರೂ.ಗಳ ಖೋತಾ ಕಂಡುಬಂದಿದೆ ಎಂದು ದಾಖಲೆ ಸಹಿತ ಮಾಹಿತಿ ಒದಗಿಸಿದರು.
ಜಿಲ್ಲೆಯ ಹಾತೂರು ಸೇರಿದಂತೆ ಮೂರ್ನಾಡು, ನಲ್ಲೂರು, ಕಾಕೋಟುಪರಂಬು, ಹೊದ್ದೂರು, ಸಂಪಾಜೆ, ನಾಪೋಕ್ಲು, ಕೊಡ್ಲಿಪೇಟೆ, ಚೇರಂಬಾಣೆ ಮತ್ತು ತೊರೆನೂರು ಸಂಘಗಳಿಗೆ ಈ ರೀತಿಯ ವಂಚನೆ ನಡೆದಿರುವದಾಗಿ ಬಾಂಡ್ ಗಣಪತಿ ಮಾಹಿತಿ ಒದಗಿಸಿದರು. ಇದೀಗ ರೈತಾಪಿ ವರ್ಗಕ್ಕೆ ಅವಶ್ಯಕತೆ ಇರುವ ಗೊಬ್ಬರ ಸರಬರಾಜು ಮಾಡಲು ಈ ಪ್ರಕರಣದಿಂದ ತೊಂದರೆ ಉಂಟಾಗಿದ್ದು, ತಕ್ಷಣ ಗೊಬ್ಬರ ಅಥವಾ ಸಂಬಂಧಿಸಿದ ಹಣ ವಾಪಸ್ ನೀಡುವಂತೆ ಒತ್ತಾಯಿಸಿರುವ ಬಾಂಡ್ ಗಣಪತಿ, ನ್ಯಾಯ ದೊರಕದಿದ್ದಲ್ಲಿ ಕುಶಾಲನಗರದಲ್ಲಿರುವ ಮಹಾ ಮಂಡಳದ ಕಚೇರಿ ಮುಂದೆ ಹೋರಾಟ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಹಾತೂರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಕಾವೇರಿ ಮಂದಣ್ಣ, ನಿರ್ದೇಶಕರಾದ ಚಂಡಿರ ಬೋಪಣ್ಣ, ಮುರುವಂಡ ಸುಬ್ರಮಣಿ, ಕೇಳಪಂಡ ದಿನೇಶ್, ಹೆಚ್.ಡಿ. ಶ್ರೀನಿವಾಸ್, ಚೇನಂಡ ಗಣಪತಿ, ಅಧಿಕಾರಿ ಬಿ.ಎಂ. ಪ್ರದೀಪ್ ಪಾಲ್ಗೊಂಡಿದ್ದರು.
ಈ ಪ್ರಕರಣದ ಬಗ್ಗೆ ಈಗಾಗಲೆ ಕರ್ನಾಟಕ ರಾಜ್ಯ ಸರಕಾರ ಮಾರಾಟ ಮಹಾ ಮಂಡಳದ ಕೇಂದ್ರ ಕಚೇರಿಯಿಂದ ತನಿಖೆ ಕೈಗೊಳ್ಳಲಾಗಿದೆ ಎಂದು ಕುಶಾಲನಗರ ವಿಭಾಗದ ವ್ಯವಸ್ಥಾಪಕ ವೆಂಕಟೇಶ್ ತಿಳಿಸಿದ್ದಾರೆ. ಈ ಹಿಂದೆ ಕಳೆದ 10 ವರ್ಷಗಳಿಂದ ವ್ಯವಸ್ಥಾಪಕರಾಗಿದ್ದ ಚಿಣ್ಣಪ್ಪ ಎಂಬವರ ಅವಧಿಯಲ್ಲಿ ಸಂಘಗಳ ಕ್ರೆಡಿಟ್ ಮೊತ್ತ ವ್ಯತ್ಯಾಸ ಕಂಡುಬಂದಿದ್ದು ತನಿಖೆ ಮುಂದುವರೆಯಲಿದೆ. ಚಿಣ್ಣಪ್ಪ ಅವರು 2015 ರ ನವೆಂಬರ್ ತಿಂಗಳಿನಿಂದ ರಜಾದಲ್ಲಿ ತೆರಳಿರುವದಾಗಿ ವೆಂಕಟೇಶ್ ತಿಳಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಕೇಂದ್ರ ಕಚೇರಿಯಿಂದ ಅಧಿಕಾರಿಗಳು ಕುಶಾಲನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದ್ದಾರೆ.