ಮಡಿಕೇರಿ, ಜೂ. 22: ಕರ್ನಾಟಕ ರಾಜ್ಯದಲ್ಲಿ ಸಾರಿಗೆ ಸೇವೆಯನ್ನು ರಾಷ್ಟ್ರೀಕರಣಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಇಂದು ಹೊಟೇಲ್ ಈಸ್ಟ್ ಎಂಡ್ನಲ್ಲಿ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಖಾಸಗಿ ಬಸ್ ಮಾಲೀಕರ ಸಭೆಯಲ್ಲಿ ಸರ್ಕಾರ ಉದ್ದೇಶಿಸಿರುವ ಯೋಜನೆ ಯಿಂದ ಖಾಸಗಿ ಸಾರಿಗೆ ಸೇವೆಯನ್ನು ನಂಬಿ ಬದುಕುತ್ತಿರುವವರ ಮೇಲಾಗುವ ಪರಿಣಾಮದ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಮಾತ್ರವಲ್ಲದೆ ಖಾಸಗಿ ಬಸ್ ಮಾಲೀಕರ ಸಂಘದಿಂದ ಸರ್ಕಾರದ ಯೋಜನೆ ವಿರುದ್ಧ ಆಕ್ಷೇಪಣೆ ಸಲ್ಲಿಸಲು ನಿರ್ಧರಿಸಲಾಯಿತು. ವಿವಿಧ ಸಂಘ - ಸಂಸ್ಥೆಗಳು, ಜನಪ್ರತಿನಿಧಿ ಗಳನ್ನು ಖುದ್ದಾಗಿ ಸಂಪರ್ಕಿಸಿ ಅವರ ಮೂಲಕವೂ ಆಕ್ಷೇಪಣೆ ಸಲ್ಲಿಸುವಂತೆ ಮನವಿ ಮಾಡಲು ತೀರ್ಮಾನಿ ಸಲಾಯಿತು.