*ಗೋಣಿಕೊಪ್ಪಲು, ಜೂ. 9: ಉತ್ತರ ಕರ್ನಾಟಕ ಗೀಗಿಪದ, ದಕ್ಷಿಣ ಕರ್ನಾಟಕದ ಜನಪದ ಗೀತೆ ಹಾಗೂ ತತ್ವ ಪದಗಳು ತಿತಿಮತಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಜನಪದ ಉತ್ಸವದಲ್ಲಿ ವಿದ್ಯಾರ್ಥಿಗಳನ್ನು ರಂಜಿಸಿದವು.

ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ಬುಡಕಟ್ಟು ಗಿರಿಜನ ನೃತ್ಯ ಕಲಾ ಸಂಸ್ಥೆ ಸಹಯೋಗದಲ್ಲಿ ತಿತಿಮತಿ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಜನಪದ ಉತ್ಸವದಲ್ಲಿ ಧಾರವಾಡದ ಜನಪದ ಕಲಾವಿದರಾದ ಬಸವಣ್ಣ, ಗೋಪಿ, ಪುರುಷೊತ್ತಮ ಪತ್ತಾರ್ ಹಾಗೂ ವಸಂತ ತಮ್ಮ ಹಾಡಿನ ಮೂಲಕ ರಂಜಿಸಿದರು. ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’, ‘ಬಿದಿರು ನಾನಾರಿಗಲ್ಲಾದವಳೋ’, ಲಾವಣಿ ಹಾಡು ಮೊದಲಾದವುಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿದರು.

ಹಾರ್ಮೋನಿಯಂ, ತಮಟೆ ಹಾಗೂ ತಬಲದ ಪಕ್ಕವಾದ್ಯಗಳು ಬಸವಣ್ಣನವರ ಹಾಡಿಗೆ ಪೂರಕವಾಗಿ ಮೂಡಿಬಂದವು. ಸಂಗೀತದ ನಡುವೆ ಹಾಸ್ಯ ಕಲಾವಿದ ಪುರುಷೋತ್ತಮ ಪತ್ತಾರ್ ತಮ್ಮ ಸಹಜ ಅಭಿನಯದ ಮೂಲಕ ವಿದ್ಯಾರ್ಥಿಗಳನ್ನು ನಗೆಗಡಲಿನಲ್ಲಿ ತೇಲಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್. ಪಂಕಜಾ ಮಾತನಾಡಿ, ಜನಪದ ಸಂಗೀತ ಮೈ ಮನಸ್ಸುಗಳನ್ನು ಮುದಗೊಳಿಸುತ್ತದೆ. ಇಂತಹ ಸಂಗೀತವನ್ನು ಯುವ ಜನತೆ ರೂಢಿಸಿಕೊಳ್ಳಬೇಕು ಎಂದು ಕರೆ ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಪ್ರಾಂಶುಪಾಲ ರಾಜಣ್ಣ, ಮುಖ್ಯ ಶಿಕ್ಷಕ ದಿನೇಶ್, ಶಿಕ್ಷಕರಾದ ವರದರಾಜು, ಕೆ.ಡಿ. ಕವಿತಾ, ಸವಿ ಬೆಳ್ಳಿಯಪ್ಪ, ಹೆಚ್. ಕರಿಯಪ್ಪ, ಅನಿತಾ ನೆರೋನಾ, ಕಮಲಾ, ಎ.ಎ. ಗಣಪತಿ, ಬಿ.ಕೆ. ರಮೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಂಜುನಾಥ್ ಹಾಜರಿದ್ದರು. - ಎನ್.ಎನ್. ದಿನೇಶ್