ಮಡಿಕೇರಿ, ಜೂ. 22: ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ಹಾಗೂ ಐಗೂರು ಗ್ರಾಮದಲ್ಲಿರುವ ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳ ದುರಸ್ತಿಗೆ ಅನುದಾನ ಒದಗಿಸಿಕೊಡುವಂತೆ ಲೋಕೋಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ ಅವರಿಗೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಪತ್ರದ ಮೂಲಕ ಆಗ್ರಹಿಸಿದ್ದಾರೆ. ‘ಶಕ್ತಿ'ಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದಿಸಿರುವ ಅವರು, ಅನುದಾನಕ್ಕೆ ಮನವಿ ಸಲ್ಲಿಸಿದ್ದಾರೆ.
ಹೆಬ್ಬಾಲೆ ಗ್ರಾಮದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಪುರಾತನ ಸೇತುವೆಯು ಮೈಸೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿದೆ. 31 ವರ್ಷಗಳ ಪುರಾತನ ಸೇತುವೆಯಾಗಿದ್ದು, ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಸೇತುವೆಯ ಮಧ್ಯಭಾಗ ಬಿರುಕು ಬಿಟ್ಟಿದ್ದು, ಮಕ್ಕಳ ಶಾಲಾ ವಾಹನಗಳು, ಬಸ್ಸುಗಳು, ಸರಕು ಸಾಗಾಣಿಕೆಯ ಭಾರೀ ವಾಹನಗಳು ಸಂಚಾರ ಮಾಡುತ್ತಿರುವದರಿಂದ ಅಪಾಯದ ಸ್ಥಿತಿಯಲ್ಲಿದೆ. ಮುಖ್ಯ ರಸ್ತೆಯಾದ್ದರಿಂದ ಸೇತುವೆಯ ಮೂಲಕವೇ ಎಲ್ಲಾ ರೀತಿಯ ವಾಹನಗಳು ಹಾದು ಹೋಗುತ್ತಲಿವೆ.
ಈ ಸಂಬಂಧ ತಾ. 27-5-2016ರಂದು ಶಕ್ತಿ ದಿನಪತ್ರಿಕೆಯಲ್ಲಿ ವರದಿಯಾಗಿದ್ದು, ಸಾರ್ವಜನಿಕರು ದುರಸ್ತಿಪಡಿಸಲು ಆಗ್ರಹಿಸಿದ್ದಾರೆ. ಸೇತುವೆಯ ದುರಸ್ತಿಗೆ ತುರ್ತಾಗಿ ಅನುದಾನವನ್ನು ಬಿಡುಗಡೆ ಮಾಡಬೇಕಾಗಿ ಲೋಕೋಪಯೋಗಿ ಸಚಿವರನ್ನು ಕೋರಿದ್ದಾರೆ.
ಐಗೂರು ಗ್ರಾಮ ಪಂಚಾಯಿತಿಗೆ ಒಳಪಡುವ ಮಡಿಕೇರಿ- ಸೋಮವಾರಪೇಟೆ ಮುಖ್ಯ ರಸ್ತೆಯಲ್ಲಿರುವ ಕಬ್ಬಿಣದ ಸೇತುವೆಯು ಕುಸಿದು ಬೀಳುವ ಹಂತದಲ್ಲಿರುತ್ತದೆ. ಸೇತುವೆಯ ಮೇಲೆ ದಿನಂಪ್ರತಿ ಹಲವಾರು ಬಸ್ಸುಗಳು, ಬೃಹತ್ ವಾಹನಗಳು, ಸರಕು ಸಾಗಾಣಿಕಾ ವಾಹನಗಳು ಓಡಾಡುತ್ತವೆ. ಸೇತುವೆಯು ಅತ್ಯಂತ ಹಳೆಯದಾಗಿದ್ದು, ಮುಖ್ಯ ರಸ್ತೆಯಾದ್ದರಿಂದ ಸದರಿ ಸೇತುವೆಯ ಮೂಲಕವೇ ಎಲ್ಲಾ ರೀತಿಯ ವಾಹನಗಳು ಹಾದು ಹೋಗುತ್ತಲಿವೆ. ಈ ಸಂಬಂಧ ಶಕ್ತಿ ದಿನಪತ್ರಿಕೆಯಲ್ಲಿ ವರದಿಯಾಗಿದ್ದು, ಸಾರ್ವಜನಿಕರು ದುರಸ್ತಿಪಡಿಸಲು ಆಗ್ರಹಿಸಿದ್ದಾರೆ. ಸೇತುವೆಯ ದುರಸ್ತಿಗೆ ತುರ್ತಾಗಿ ಅನುದಾನವನ್ನು ಬಿಡುಗಡೆ ಮಾಡಬೇಕಾಗಿ ಕೋರಿದ್ದಾರೆ.