ವೀರಾಜಪೇಟೆ, ಜೂ. 26: ಕಳೆದ 8 ದಿನಗಳ ಹಿಂದೆ ಪ್ರಾಣಿ ಬೇಟೆಯ ಸಂದರ್ಭದಲ್ಲಿ ಪಾಲಂಗಾಲದ ಎನ್. ಸತೀಶ್ ಎಂಬಾತ ಗುಂಡೇಟಿಗೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ಗ್ರಾಮಾಂತರ ಪೊಲೀಸರು ಒಟ್ಟು 17 ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ತಲೆ ಮರೆಸಿಕೊಂಡಿರುವ 15 ಮಂದಿಯ ಶೋಧನೆಯಲ್ಲಿ ತೊಡಗಿದ್ದಾರೆ.

ಜೂನ್ 19 ರಂದು ಬೆಳಿಗ್ಗೆ ಪಾಲಂಗಾಲ ಗ್ರಾಮದ ಬಳಿಯ ಮಲೆತಿರಿಕೆ ಬೆಟ್ಟದ ವ್ಯಾಪ್ತಿಯ ಕಣ್ಣಮಾಡು (ಚೊಟ್ಟಕುಂಡಿ) ಎಂಬಲ್ಲಿ ರಕ್ಷಿತಾರಣ್ಯದಲ್ಲಿ ಬೇಟೆಗೆ ಹೋಗಿದ್ದ ಸಂದರ್ಭದಲ್ಲಿ ಗುಂಡೇಟಿನಿಂದ ಅದೇ ಗ್ರಾಮದ ಸತೀಶ್ ಎಂಬವರು ಸಾವನ್ನಪ್ಪಿದ್ದರು. ಗ್ರಾಮಾಂತರ ಪೊಲೀಸರು ಅದೇ ದಿನ ತಡ ರಾತ್ರಿಯಲ್ಲಿ ಈ ಪ್ರಕರಣವನ್ನು ಗುಂಡು ಹಾರಿಸಿ ಕೊಲೆ ಎಂದು ಪ್ರಥಮ ವರ್ತಮಾನದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಎಫ್.ಐ.ಆರ್. ವರದಿಯಲ್ಲಿ ಪೊಲೀಸರು ಪ್ರಮುಖ ಆರೋಪಿ ಪಾಲಂಗಾಲದ ಕೆ. ಸುರೇಶ್ ಅಲಿಯಾಸ್ ಅಮ್ಮುಂಞ, ವಿಠಲ ಇತರರು ಎಂದು ತೋರಿಸಿದ್ದರು. ಪ್ರಕರಣದ ತನಿಖೆಯಿಂದ ಈಗ ಒಟ್ಟು 17 ಮಂದಿ ಭಾಗಿಯಾಗಿದ್ದು ತಡವಾಗಿ ಪೊಲೀಸರಿಗೆ ತಿಳಿದ ನಂತರ ಎಲ್ಲಾ 17 ಮಂದಿಯ ಹೆಸರನ್ನು ಎಫ್.ಐ.ಆರ್. ನಲ್ಲಿ ನಮೂದಿಸಲಾಗಿದೆ.

ಸತೀಶ್ ಸಾವನ್ನಪ್ಪಿದ ದಿನವೇ ಪ್ರಕರಣದ ಆರೋಪಿ ಒಂಟಿ ನಳಿಗೆ ಕೋವಿ ಸಮೇತ ಸಂಜೆ ಗ್ರಾಮಾಂತರ ಪೊಲೀಸ್ ಠಾಣೆಗೆ ಶರಣಾಗತನಾದ ನಂತರ ಈತನನ್ನು ಕೂಲಂಕುಶವಾಗಿ ತನಿಖೆ ನಡೆಸಿ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಈತನನ್ನು ತಾ. 20 ರಂದು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 15 ದಿನಗ ಳವರೆಗೆ ನ್ಯಾಯಾಂಗ ಬಂಧನ ದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಪೊಲೀಸರ ತನಿಖೆಯ ಪ್ರಕಾರ 16 ಮಂದಿ ಭಾನುವಾರ ಬೆಳಿಗ್ಗೆ 9 ಗಂಟೆಗೆ ಬೇಟೆಗೆ ತೆರಳಿದ್ದರು. ನಂತರ ಮೃತ ಸತೀಶ್ ತಡವಾಗಿ ಬೆಟ್ಟಕ್ಕೆ ಹೋದಾಗ ದುರ್ಘಟನೆ ಸಂಭವಿಸಿದೆ. ಮೃತ ಸತೀಶ್ ಮಲೆತಿರಿಕೆ ಬೆಟ್ಟದ ಕಣ್ಣಮಾಡು ದಟ್ಟಾರಣ್ಯದಲ್ಲಿ ಮರ ಗಿಡಗಳ ಕುರುಚಲು ಗಿಡಗಳ ಪೊದೆಯಲ್ಲಿ ತಲೆ ಬಗ್ಗಿಸಿಕೊಂಡು ಬೇಟೆಯ ನಿಗದಿತ ಸ್ಥಳಕ್ಕೆ ಹೋಗುವ ಸಂದರ್ಭದಲ್ಲಿ ಪ್ರಾಣಿಗಳ ಬೇಟೆಗೆ ಸಿದ್ಧತೆ ನಡೆಸಿದ್ದ ಹಾಗೂ ಗುಂಡು ಹಾರಿಸುವದರಲ್ಲಿ ಪರಿಣತೆಯನ್ನು ಹೊಂದಿದ್ದ ಸುರೇಶ್ ಪೊದೆಗೆ ಮಧ್ಯದಲ್ಲಿ ಕಾಡು ಪ್ರಾಣಿ ಎಂದು ಗ್ರಹಿಸಿ ಗುಂಡು ಹಾರಿಸಿದಾಗ ಗುಂಡು ಸತೀಶ್‍ನ ಹಣೆಯ ಒಳಗೆ ನುಗ್ಗಿ ತಲೆಯ ಮೇಲಿನ ಭಾಗ ಛಿದ್ರವಾಗಿದೆ. ಈ ಗುಂಡಿನ ಚಿಲ್ಲುಗಳ ತುಣುಕುಗಳು ಸತೀಶ್‍ನ

ಎದೆಯನ್ನು ಹೊಕ್ಕಿದ್ದರಿಂದ ಎದೆಯ ಲಿವರ್ ಭಾಗ ಹಾಗೂ ಹೃದಯ ಭಾಗವು ಜಖಂಗೊಂಡಿರುವದಾಗಿ ತನಿಖೆಯಿಂದ ತಿಳಿದುಬಂದಿದೆ.

ಗ್ರಾಮಾಂತರ ಪೊಲೀಸರು ಕೆ. ವಿಠಲ, ಕೆ. ಸುರೇಶ್, ಎಂ. ಜೀವನ್, ಕೆ. ಬೆಲ್ಲು, ಬಿ. ದರ್ಶನ್, ದೊರೆಯಪ್ಪ, ಕೆ. ರಾಜಾ, ಕ್ರಿಶ್ಚಿಯನ್ನರ ಡಿಕ್ಕು, ಎಂ. ಮಹೇಶ್, ಹೆಚ್. ರಾಜಾ, ಬಿ. ಪ್ರಕಾಶ್, ಎಂ. ಮಧು, ಗೋಪಾಲ, ಕೆ. ಶ್ಯಾಮ್, ಶರವಣ, ಸಿ. ದರ್ಶನ್ ಹಾಗೂ ರಕ್ಷಿತಾರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿದ ಆರೋಪದ ಮೇರೆ ಮೃತ ಎನ್. ಸತೀಶ್ ವಿರುದ್ಧವೂ ಪ್ರಕರಣ ದಾಖಲು ಮಾಡಿದ್ದಾರೆ.

ಈ 16 ಮಂದಿ ವಿರುದ್ಧ ಐ.ಪಿ.ಸಿ. 302, ಐ.ಪಿ.ಸಿ. ಇಂಡಿಯನ್ ಶಸ್ತ್ರಾಸ್ತ ಕಾಯದೆ 3 ಮತ್ತು 25 ಜೊತೆಗೆ ವೈಲ್ಡ್‍ಲೈಫ್ ಕಾಯದೆ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿ ದ್ದಾರೆ. ಈಗ 15 ಮಂದಿ ನಿರೀಕ್ಷಣಾ ಜಾಮೀನು ಕೋರಿ ವೀರಾಜಪೇಟೆ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುವದಾಗಿ ತಿಳಿದು ಬಂದಿದೆ.

ಬೇಟೆಗೆ ಬಳಸಿದ ಕೋವಿಯ ಮಾಲೀಕರ ಹೆಸರು ಪೊಲೀಸರಿಗೆ ಗೊತ್ತಾಗಿದ್ದು ಪೊಲೀಸರು ಕೋವಿ ಮಾಲೀಕರ ಮೇಲೂ ಪ್ರಕರಣ ದಾಖಲಿಸಲಿರುವದಾಗಿ ತಿಳಿದುಬಂದಿದೆ. ತಾ. 19 ರಂದು ಪ್ರಕರಣ ನಡೆದ ದಿನವೇ ಮೃತ ಸತೀಶ್‍ನ ಪತ್ನಿ ಶಿಲ್ಪಾ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ ನನ್ನ ಪತಿ ಸತೀಶ್‍ನನ್ನು ಗುಂಡು ಹಾರಿಸಿ ಕೊಲೆ ಮಾಡಿರುವ ಸಂಶಯ ಇರುವದಾಗಿ ಲಿಖಿತವಾಗಿ ತಿಳಿಸಿದ್ದರು.