ಸೋಮವಾರಪೇಟೆ,ಮೇ 15: 21ನೇ ಶತಮಾನದಲ್ಲೂ ಅಸಮಾನತೆ ತಾಂಡವವಾಡುತ್ತಿರುವದು ನಾಗರಿಕ ಸಮಾಜದ ದುರಂತ ಎಂದು ದಾವಣಗೆರೆ ಸುಕ್ಷೇತ್ರ ಶ್ರೀ ರುದ್ರೇಶ್ವರ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಮಹಾ ಸ್ವಾಮೀಜಿ ಅಭಿಪ್ರಾಯಿಸಿದರು.
ಇಲ್ಲಿನ ವಿರಕ್ತ ಮಠದಲ್ಲಿ ಆಯೋಜಿಸಲಾಗಿದ್ದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಗಳ 29ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿಯೇ ಸಾಮಾಜಿಕ ಅನಿಷ್ಠಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವನ್ನು ಬಸವಣ್ಣನವರು ಮಾಡಿದ್ದರು. ಅಸಮಾನತೆಯ ವಿರುದ್ಧ ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ಬಸವಣ್ಣನವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದ್ದು, 21ನೇ ಶತಮಾನದಲ್ಲಿರುವ ಮಂದಿ ದೇವಾಲಯಗಳಿಗೆ ಮಹಿಳೆಯರ ಪ್ರವೇಶ ನಿರ್ಬಂಧಿಸುವ ಮೂಲಕ ಅಸಮಾನತೆಯನ್ನು ಜೀವಂತವಿರಿಸಿ ರುವದು ದುರ್ದೈವ ಎಂದರು.
ಮುಖ್ಯ ಅತಿಥಿಯಾಗಿದ್ದ ಕೂಡಿಗೆ ಡಯಟ್ನ ಉಪನ್ಯಾಸಕಿ ಸಾವಿತ್ರಿ ಮಾತನಾಡಿ, ಪರಿಸರ ಕಾಳಜಿ ಎಲ್ಲರಲ್ಲೂ ಅಗತ್ಯವಾಗಿದೆ. ಕಾಂಕ್ರೀಟ್ ಕಟ್ಟಡದಿಂದ ಉಸಿರಾಟಕ್ಕೂ ಕಷ್ಟವಾಗುತ್ತಿದೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕು ಎಂದರಲ್ಲದೆ, ಅಧ್ಯಾತ್ಮಿಕತೆ ಯನ್ನು ಮರೆತ ಪರಿಣಾಮ ಸಮಾಜದಲ್ಲಿ ಅಶಾಂತಿ-ಅಪರಾಧ ಹೆಚ್ಚುತ್ತಿದೆ. ವ್ಯಾಜ್ಯಮುಕ್ತ, ಮಾಲಿನ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೋರ್ವರೂ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿರಕ್ತ ಮಠಾಧೀಶ ವಿಶ್ವೇಶ್ವರ ಸ್ವಾಮೀಜಿ ಮಾತನಾಡಿ, 1916ರಲ್ಲಿ ಜನಿಸಿದ ಗುರುಸಿದ್ಧ ಸ್ವಾಮೀಜಿಗಳು ತಮ್ಮ ಜೀವನವನ್ನೇ ಸಾಮಾಜಿಕ ಸುಧಾರಣೆಗಾಗಿ ಕಳೆದರು. ಸೋಮವಾರಪೇಟೆಯ ಮಠದಲ್ಲಿ ಸುಮಾರು 6 ದಶಕಗಳ ಕಾಲ ಸೇವೆ ಸಲ್ಲಿಸಿ ಇಂದಿಗೂ ಜನಮಾಸನದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಸ್ಮರಿಸಿದರು.
ಮಠದದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಪಂ. ಸದಸ್ಯೆ ಕುಮುದ ಧರ್ಮಪ್ಪ, ಯಾವದೇ ಸಮುದಾಯವಾದರೂ ಒಗ್ಗಟ್ಟು ಮುಖ್ಯ. ಇಂತಹ ಕಾರ್ಯಕ್ರಮಗಳಿಂದ ಪರಸ್ಪರ ಬಾಂಧವ್ಯ ವೃದ್ಧಿಸುತ್ತದೆ. ಸಮಾಜಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ವೀರಶೈವ ಸಮಾಜದ ಅಧ್ಯಕ್ಷ ಕೆ.ಎನ್. ಶಿವಕುಮಾರ್, ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಉಪಸ್ಥಿತರಿದ್ದು ಮಾತನಾಡಿದರು.
ಇದಕ್ಕೂ ಮುನ್ನ ವಿರಕ್ತ ಮಠದಲ್ಲಿ ಶಿರದನಹಳ್ಳಿ ಶ್ರೀಕ್ಷೇತ್ರ ಬಸವ ಕಲ್ಯಾಣ ಮಠದ ಮಠಾಧೀಶರಾದ ಸಿದ್ದಲಿಂಗ ಮಹಾಸ್ವಾಮೀಜಿಗಳಿಂದ ವಟುಗಳಿಗೆ ಶಿವದೀಕ್ಷಾ ಸಂಸ್ಕಾರ ನಡೆಯಿತು. ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಮಹಾಸ್ವಾಮೀಜಿಗಳಿಂದ ಷಟಸ್ಥಲ ಧ್ವಜಾರೋಹಣ ನೆರವೇರಿತು.
ಕಾರ್ಯಕ್ರಮದಲ್ಲಿ 2015ರಲ್ಲಿ ನಡೆದ ಶಿವಾನುಭವ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಶಸ್ತಿ ಪತ್ರ, 2015-16ರಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಸವೇಶ್ವರ ಸಮುದಾಯ ಭವನ ಅಧ್ಯಕ್ಷ ಶಿವಮೂರ್ತಿ, ಸಭಾ ಸಂಚಾಲಕ ಮೃತ್ಯುಂಜಯ, ಬಿ.ಪಿ. ಶಿವಕುಮಾರ್, ಉಪನ್ಯಾಸಕ ಬಿ.ಪಿ. ಸರ್ವಜ್ಞಮೂರ್ತಿ ಸೇರಿದಂತೆ ವೀರಶೈವ ಸಮಾಜದ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಹೈದರಾಬಾದಿನ ಆಯುರ್ವೇದ ಸಂಸ್ಥೆಯಿಂದ ಆಯೋಗ್ಯ ತಪಾಸಣಾ ಶಿಬಿರ ನಡೆಯಿತು.