ಶನಿವಾರಸಂತೆ, ಜೂ. 27: ಕೊಡ್ಲಿಪೇಟೆ ವ್ಯಾಪ್ತಿಯ ಹ್ಯಾಂಡ್ ಪೊಸ್ಟ್ ಬಳಿ ಅನಧಿಕೃತವಾಗಿ ನಕಲಿ ಪರವಾನಿಗೆ ಸೃಷ್ಟಿಸಿ ಮರಳು ಸಾಗಾಣಿಕೆ ನಡೆಸುತ್ತಿದ್ದ ವಾಹನದ (ಕೆ.ಎ. 07. ಎ. 450) ವಿರುದ್ಧ ಕ್ರಮ ಜರುಗಿಸಲಾಗಿದೆ.

ಕೊಡ್ಲಿಪೇಟೆ ಹ್ಯಾಂಡ್‍ಪೊಸ್ಟ್ ಹತ್ತಿರ ಮರಳು ತುಂಬಿಸಿಕೊಂಡು ಬರುತ್ತಿದ್ದ ವಾಹನವನ್ನು ಭೂ ವಿಜ್ಞಾನಿ ಮಹೇಶ್ ಅವರು ತಡೆದು ನಿಲ್ಲಿಸಿ, ಮರಳು ಸಾಗಾಣಿಕೆ ಪರವಾನಿಗೆ ನಕಲಿಯೋ ಅಥವಾ ಅಸಲಿಯೋ ಎಂಬದರ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಉಪನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಮಂಗಳೂರುವಿಗೆ ಕಳುಹಿಸಿ ಕೊಡಲಾಗಿತ್ತು.

ಪರವಾನಿಗೆಯನ್ನು ಗಣಿ ಭೂ ವಿಜ್ಞಾನಿ ಇಲಾಖೆ ಮಂಗಳೂರು ಅವರು ಪರಿಶೀಲನೆ ಮಾಡಿ ನಮ್ಮ ಕಚೇರಿಯಿಂದ ಈ ಪರವಾನಿಗೆಯನ್ನು ವಿತರಿಸಿರುವದಿಲ್ಲ. ಪರವಾನಿಗೆಯೂ ನಕಲಿಯಾಗಿರುತ್ತದೆ ಎಂದು ಬಂದ ವರದಿಯಂತೆ ನಕಲಿ ಪರವಾನಿಗೆ ಸೃಷ್ಟಿಸಿ ಕಳ್ಳತನದಿಂದ ಮರಳು ಸಾಗಾಣಿಕೆ ನಡೆಸಿರುವದು ಕಾನೂನು ಬಾಹಿರವಾಗಿರುತ್ತದೆ. ವಾಹನದ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಸರಕಾರಕ್ಕೆ ಆಗುವ ನಷ್ಟವನ್ನು ತಪ್ಪಿಸಲು ಇಲಾಖೆಗೆ ಸಹಕರಿಸುವಂತೆ ಭೂ ವಿಜ್ಞಾನಿ ಮಹೇಶ್ ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸ್ ಠಾಣೆಯ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಬಿ.ಎಸ್. ಜನಾರ್ಧನ ವಿಧಿ 42,43, 44 ಹಾಗೂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿದ್ದಾರೆ.