ಸಿದ್ದಾಪುರ, ಜೂ. 26. : ಬೈಕ್ ಹಾಗೂ ಟೆಂಪೋ ವಾಹನ ನಡುವೆ ಮುಖಾಮುಖಿ ಡಿಕ್ಕಿ, ಸಂಭವಿಸಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿವೆ.

ವೀರಾಜಪೇಟೆ ತಾಲೂಕು ಅಮ್ಮತ್ತಿ ಕಳತ್ಮಾಡು ಗ್ರಾಮದ ನಿವಾಸಿ ಕಾಯಿರ್‍ತೊಳಿ ಮಾದಪ್ಪ (60) ಹಾಗೂ ಪತ್ನಿ ಸಾವಿತ್ರಿ (55) ಬೆಳಿಗ್ಗೆ ತಮ್ಮ ಬೈಕ್‍ನಲ್ಲಿ ಕುಶಾಲನಗರದಲ್ಲಿ ಸಂಬಂಧಿಕರ ಮದುವೆಗೆ ತೆರಳಿದ್ದರು.

ಮದುವೆ ಸಮಾರಂಭವನ್ನು ಮುಗಿಸಿ ಸಂಜೆ 4 ಗಂಟೆಗೆ ಮಾದಪ್ಪ ತಮ್ಮ ಪತ್ನಿಯೊಂದಿಗೆ ತಮ್ಮ ಗ್ರಾಮಕ್ಕೆ ಹಿಂತಿರುಗುತ್ತಿದ್ದ ವೇಳೆ, ವಾಲ್ನೂರು ತ್ಯಾಗತ್ತೂರು ಸಮೀಪ ಜ್ಯೋತಿ ನಗರ ತಿರುವು ಬಳಿ ಎದುರಿನಿಂದ ಬಂದ ಟೆಂಪೋ ವಾಹನ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಚಾಲನೆ ಮಾಡುತ್ತಿದ್ದ ಮಾದಪ್ಪ ಹಾಗೂ ಪತ್ನಿ ಸಾವಿತ್ರಿ ಇಬ್ಬರು ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟರು.

ಡಿಕ್ಕಿ ಪಡಿಸಿದ ಟೆಂಪೋ ವಾಹನದ ಚಾಲಕ ತನ್ನ ವಾಹನವನ್ನು ನಿಲ್ಲಿಸದೆ ಪರಾರಿಯಾಗಲೆತ್ನಿಸಿದ ವೇಳೆ ಇದನ್ನು ಗಮನಿಸಿದ ಸಾರ್ವಜನಿಕರು ಅಂದಾಜು 3ಕೀಮೀ ನಷ್ಟು ದೂರ ಟೆಂಪೋ ವಾಹನವನ್ನು ಹಿಂಬಾಲಿಸಿ ತಡೆದು ನಿಲ್ಲಿಸಿ ಚಾಲಕನನ್ನು ಸಿದ್ದಾಪುರ ಠಾಣೆಗೆ ಒಪ್ಪಿಸಿದರು.

ಡಿಕ್ಕಿಯ ಪರಿಣಾಮ ಮಾದಪ್ಪ ಹಾಗೂ ಸಾವಿತ್ರಿಯನ್ನು ಬೇರೊಂದು ವಾಹನದಲ್ಲಿ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕ್ಕಿತ್ಸೆಗೆ ದಾಖಲಿಸಲಾಯಿತು. ಆಸ್ಪತ್ರೆಯಲ್ಲಿ ಚಿಕ್ಕಿತ್ಸೆ ಫಲಕಾರಿಯಾಗದೆ ಮಾದಪ್ಪ ಮೃತ ಪಟ್ಟಿದ್ದು, ಸಾವಿತ್ರಿ ಅವರನ್ನು ಹೆಚ್ಚಿನ ಚಿಕ್ಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.

ಸಿದ್ದಾಪುರ ಠಾಣಾಧಿಕಾರಿ ಬಿ.ಜಿ.ಕುಮಾರ್, ಎಎಸ್‍ಐ ಸೀತರಾಮ್ ಮುಂದಿನ ಕ್ರಮ ಕೈಗೊಂಡಿದ್ದಾರೆ.

-ಅಂಚೆಮನೆಸುಧಿ