ಮಡಿಕೇರಿ, ಜೂ. 24: ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಉಳುವವನೇ ಭೂಮಿಯ ಒಡೆಯ, ಮಲ ಹೊರುವ ಪದ್ಧತಿ ನಿಷೇಧ, ಜೀತ ಪದ್ಧತಿ ನಿರ್ಮೂಲನೆ, ವಿದ್ಯಾರ್ಥಿ ನಿಲಯಗಳ ಆರಂಭ ಹೀಗೆ ವಿವಿಧ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಡವರಿಗೆ ದಾರಿ ದೀಪವಾಗಿದ್ದರು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ನಗರದ ಡಿ. ದೇವರಾಜ ಅರಸು ಭವನದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಅವರ ಜೀವನ ಮತ್ತು ಕೊಡುಗೆ ಕುರಿತಂತೆ ನಮನ ನೃತ್ಯ ರೂಪಕ ಮತ್ತು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಡಿ. ದೇವರಾಜ ಅರಸು ಅವರು ಹಿಂದುಳಿದ ವರ್ಗಗಳ ಆಶಾಕಿರಣ ಮತ್ತು ಮಾರ್ಗದರ್ಶಕರಾಗಿದ್ದರು. ಇವರ ಜೀವನ ಚರಿತ್ರೆ, ಆಡಳಿತ ವ್ಯವಸ್ಥೆಯನ್ನು ತಿಳಿಯುವಂತಾಗಬೇಕು. ಒಳ್ಳೆಯ ಕೆಲಸ ಮಾಡಿದಾಗ ಚಿರಂಜೀವಿಯಾಗಲು ಸಾಧ್ಯ. ಅದಕ್ಕೆ ಉತ್ತಮ ಉದಾಹರಣೆ ಡಿ. ದೇವರಾಜ ಅರಸು ಎಂದು ಶಾಸಕರು ಹೇಳಿದರು.
ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಎಂದರೆ ತಪ್ಪಾಗಲಾರದು. ಹಿಂದುಳಿದ ವರ್ಗದವರನ್ನು ಮೇಲೆತ್ತಲು ಶ್ರಮಿಸಿದ ಮುತ್ಸದ್ದಿ, ಎಲ್ಲಾ ಬಡವರಿಗೂ ಶಿಕ್ಷಣ ದೊರೆಯುವಂತಾಗಲು ಕಾರಣಕರ್ತ ರಾದರು. ಡಿ. ದೇವರಾಜ ಅರಸು ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಯನ್ನು ಸದಾ ಸ್ಮರಿಸುವಂತಾಗಬೇಕು ಎಂದು ಹೇಳಿದರು.
ಪ್ರಮುಖರಾದ ಟಿ.ಪಿ. ರಮೇಶ್ ಮಾತನಾಡಿ, ಇದೇ ಆಗಸ್ಟ್, 20ಕ್ಕೆ ಡಿ. ದೇವರಾಜ ಅರಸು ಅವರ ಶತಮಾನೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ಆ ದಿಸೆಯಲ್ಲಿ ಡಿ. ದೇವರಾಜ ಅರಸು ಅವರ ಕುರಿತ ಬದುಕು, ಜೀವನ ಚರಿತ್ರೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅರಸು ಅವರ ಬದುಕು, ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳು ವಂತಾಗಬೇಕು ಎಂದು ಹೇಳಿದರು.
ಜಿ.ಪಂ. ಸದಸ್ಯೆ ಸರೋಜಮ್ಮ, ಸೋಮವಾರಪೇಟೆ ತಾ. ಪಂ. ಅಧ್ಯಕ್ಷೆ ಪುಷ್ಪ, ನೃತ್ಯ ರೂಪಕರಾದ ರೂಪಾ ರಾಜೇಶ್, ಐಟಿಡಿಪಿ ಇಲಾಖಾ ಅಧಿಕಾರಿ ಸತೀಶ್, ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಸಿ. ಜಗನ್ನಾಥ್ ಮತ್ತಿತರರು ಇದ್ದರು. ಬಿಸಿಎಂ. ಇಲಾಖಾ ಅಧಿಕಾರಿ ಕೆ.ವಿ. ಸುರೇಶ್ ಅವರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ತಾ. 25 ರಂದು (ಇಂದು) ಸಂಜೆ 6.30 ಗಂಟೆಗೆ ಚಲನಚಿತ್ರ ಕಲಾವಿದ ಮಂಡ್ಯ ರಮೇಶ್ ಅವರ ನಿರ್ದೇಶನದಲ್ಲಿ ನಾಟಕ ಪ್ರದರ್ಶನ (ನಾಡ ಒಡನಾಡಿ) ಜರುಗಲಿದೆ.