ಮಡಿಕೇರಿ, ಜೂ. 30: ಸಭೆಯ ಆರಂಭದಿಂದ ಅಂತ್ಯದವರೆಗೂ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ, ಅಧಿಕಾರಿಗಳ ವಿರುದ್ಧ ವಾಗ್ಧಾಳಿ, ಇಷ್ಟಕ್ಕೆ ಸೀಮಿತವಾಗಿದ್ದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಯಾವೊಂದು ತೀರ್ಮಾನವೂ ಆಗಲಿಲ್ಲ.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ಆರಂಭದಲ್ಲೇ ಉಪ ಕಾರ್ಯದರ್ಶಿ ತಾಕತ್‍ರಾವ್ ಸಭಾ ನಡಾವಳಿ ವಾಚಿಸುತ್ತಿದ್ದುದಕ್ಕೆ ಸದಸ್ಯರಾದ ಕೆ.ಪಿ. ಚಂದ್ರಕಲಾ ಹಾಗೂ ಪ್ರತ್ಯು ಆಕ್ಷೇಪ ವ್ಯಕ್ತಪಡಿಸಿ ಸಭೆಯ ಅಧ್ಯಕ್ಷರೆ ನಡಾವಳಿ ವಾಚಿಸಿ ಸಭೆ ಮುಂದುವರೆಸುವಂತೆ ಒತ್ತಾಯಿಸಿದರು. ಸ್ಥಾಯಿ ಸಮಿತಿ ರಚನೆ ಸಂಬಂಧ ಅನುಮೋದನೆ ಕೋರಿದಾಗ ಅಧ್ಯಕ್ಷರೇ ನೀವೇ ಸಮಿತಿ ರಚಿಸಿ ಅದಕ್ಕೇಕೆ ಅನುಮೋದನೆ ಕೋರುತ್ತೀರಿ, ನಿಮ್ಗೆ ಯಾರಿಂದಾದ್ರೂ ಏನಾದ್ರು ಒತ್ತಡ ಇದೆಯಾ' ಎಂದು ಚಂದ್ರಕಲಾ ಪ್ರಶ್ನಿಸಿದರು. ಈ ವಿಚಾರ ಕೆಲಕಾಲ ಆಡಳಿತ ಹಾಗೂ ವಿಪಕ್ಷದ ಕೆಲ ಸದಸ್ಯರ ನಡುವೆ ಆರೋಪ - ಪ್ರತ್ಯಾರೋಪಕ್ಕೆ ಕಾರಣವಾಯಿತು.
ಹಳೇ ಅನುದಾನದÀ ವಿವರ ನೀಡದೆ ಹೊಸ ಯೋಜನೆಗಳ ಮಾಹಿತಿಯನ್ನು ಸಭೆಯಲ್ಲಿಟ್ಟರೆ ಏನು ಪ್ರಯೋಜನ. ಕಳೆದ ಬಾರಿಯ ಅನುದಾನ ವ್ಯಯದ ಬಗ್ಗೆ ಲಿಖಿತ ಮಾಹಿತಿ ನೀಡಿ ಎಂದು ಸದಸ್ಯರಾದ ಪ್ರತ್ಯು ಹಾಗೂ ಕುಮುದಾ ಧರ್ಮಪ್ಪ ಒತ್ತಾಯಿಸಿದರು.
ಕೊಡಗನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲು
(ಮೊದಲ ಪುಟದಿಂದ) ಕಳೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆಯೆ? ಒಂದು ವೇಳೆ ಬರೆದಿದ್ದರೆ ಆ ಪ್ರತಿಯನ್ನು ಸಭೆಗೆ ನೀಡುವಂತೆ ಸದಸ್ಯೆ ಸರಿತಾ ಪೂಣಚ್ಚ ಒತ್ತಾಯಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿಗೆ ಪತ್ರ ಕಳುಹಿಸಲಾಗಿದೆ ಎಂದು ಉಪ ಕಾರ್ಯದರ್ಶಿ ತಾಕತ್‍ರಾವ್ ಅವರು ತಿಳಿಸಿದಾಗ ಜಿಲ್ಲಾಧಿಕಾರಿಗಳಿಗೆ ಯಾಕ್ರೀ ಕಳುಹಿಸಿದ್ದು? ಎಂದು ಸದಸ್ಯೆ ಚಂದ್ರಕಲಾ ಕಿಡಿಕಾರಿದರು. ಈ ಬಗ್ಗೆ ಕೆಲಕಾಲ ಚರ್ಚೆ ನಡೆಯಿತಾದರೂ ಸರ್ಕಾರಕ್ಕೆ ಕಳುಹಿಸಲಾದ ಪತ್ರದ ಪ್ರತಿ ಸಭೆಗೆ ಬರಲೇ ಇಲ್ಲ. ನಮ್ಮ ನಿರ್ಣಯಗಳು ಜಾರಿಯಾಗಲ್ಲ ಎನ್ನುವದಾದರೆ ನಾವ್ಯಾಕೆ ಸಭೆಗೆ ಬರಬೇಕು? ವಡೆ- ಜಾಮೂನ್ ತಿನ್ನೋಕಾ ಎಂದು ಸರಿತಾ ಆಕ್ರೋಶÀ ವ್ಯಕ್ತಪಡಿಸಿದರು. ಸದಸ್ಯ ಸಿ.ಕೆ. ಬೋಪಣ್ಣ ಮಾತನಾಡಿ, ಗೋಣಿಕೊಪ್ಪ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಜಿ.ಪಂ.ನಿಂದ ಅನುದಾನ ನೀಡುವಂತೆ ಮನವಿ ಮಾಡಿದರು. ಸದಸ್ಯೆ ಸರೋಜಮ್ಮ ಮಾತನಾಡಿ, ಶನಿವಾರಸಂತೆ ಪೊಲೀಸ್ ಠಾಣೆಗೆ ಠಾಣಾಧಿಕಾರಿ ಇಲ್ಲದ ಕಾರಣ ಕಳ್ಳರು ಹೆಚ್ಚಾಗಿದ್ದು, ಕೂಡಲೇ ಠಾಣಾ ಧಿಕಾರಿಯ ನೇಮಕವಾಗ ಬೇಕೆಂದು ಒತ್ತಾಯಿಸಿದರು.
ಸಭೆಯ ನಡುವೆ ಬೇರೊಂದು ಸಭೆಗಾಗಿ ಸಿಇಓ ಚಾರುಲತಾ ಸೋಮಲ್ ಅವರು ಅಧ್ಯಕ್ಷರಿಗೆ ಮಾಹಿತಿ ನೀಡಿ ತೆರಳಿದರು. ಇದಕ್ಕೆ ಆಕ್ಷೇಪಿಸಿದ ಪ್ರತ್ಯು, ಶ್ರೀನಿವಾಸ್, ಸರಿತಾ ಪೂಣಚ್ಚ ಇವರುಗಳು ಸಿಇಓ ಅವರು ತೆರಳಿದ್ದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಸಭೆಯಲ್ಲಿದ್ದ ಸದಸ್ಯರಿಗೂ ತಿಳಿಸಿ ಹೋಗಬಹುದಿತ್ತು ಎಂದು ಅಭಿಪ್ರಾಯಿಸಿದರು.
ಆರೋಗ್ಯಾಧಿಕಾರಿ ಶ್ರೀರಂಗಪ್ಪ ಅವರ ಕಾರ್ಯವೈಖರಿ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾದಾಗ ‘ಕೆಲ್ಸ ಮಾಡೋಕೆ ಆಗದಿದ್ರೆ ‘ಟ್ರಾನ್ಸ್‍ಫರ್' ತಗೊಂಡು ಹೋಗ್ರಿ' ಎಂದು ಸದಸ್ಯೆ ಚಂದ್ರಕಲಾ ಅವರು ಹೇಳಿದಾಗ, ‘ದಯವಿಟ್ಟು ಟ್ರಾನ್ಸ್‍ಫರ್ ಕೊಡ್ಸಿಮೇಡಂ; ಹೋಗ್ತೀನಿ. ನಂಗೂ ಸಾಕಾಗಿದೆ' ಎಂದು ಶ್ರೀರಂಗಪ್ಪ ಪ್ರತ್ಯುತ್ತರ ನೀಡಿದರು. ಈ ವೇಳೆ ಸದಸ್ಯ ಪ್ರತ್ಯು ಮಧ್ಯ ಪ್ರವೇಶಿಸಿ ದುರಹಂಕಾರದ ಮಾತು ಸರಿಯಲ್ಲ ಎಂದು ಅಧಿಕಾರಿಗೆ ಹೇಳಿದರು. ‘ಅವರ ಟ್ರಾನ್ಸ್‍ಫರ್‍ಗೆ ನಾವು ಒದ್ದಾಡೋದೇ ಬೇಡ; ಅವರು ಇಲ್ಲೇ ಕೊಳೆಯಲಿ' ಎಂದು ಚಂದ್ರಕಲಾ ತಿರುಗೇಟು ನೀಡಿದರು.
ಸದಸ್ಯ ಶಿವು ಮಾದಪ್ಪ ಮಾತನಾಡಿ ಅಧಿಕಾರಿಗಳು ಯಾವದೇ ಮಾಹಿತಿಯನ್ನು ಸಮರ್ಪಕವಾಗಿ ನೀಡದ ಮೇಲೆ ನಾವೇಕೆ ಸಭೆಗೆ ಬರಬೇಕು. ಜನರ ಸಮಸ್ಯೆಗೆ ಸ್ಪಂದಿಸಲಾಗದ ನಾವು ಸಭೆಯಲ್ಲಿ ಕುಳಿತೇನು ಪ್ರಯೋಜನ ಎಂದು ವಿಷಾದಿಸಿದರು. ಇನ್ನು ಮುಂದೆ ಯಾದರೂ ಅಧಿಕಾರಿಗಳು ಅಭಿವೃದ್ಧಿ ಕೆಲಸಕ್ಕಾಗಿ ಜನಪ್ರತಿನಿಧಿ ಗಳೊಂದಿಗೆ ಕೈ ಜೋಡಿಸಬೇಕು. ಇಲ್ಲವಾದರೆ ನಾನಂತೂ ಸಭೆಗೆ ಬರಲಾರೆ ಎಂದು ಅಸಮಾಧಾನ ಹೊರಹಾಕಿದರು. ಮಾಹಿತಿ ಇಲ್ಲದೆ ಬರುವ ಅಧಿಕಾರಿಗಳನ್ನು ಸಭೆಯಿಂದ ಹೊರ ಹಾಕಿ ಎಂದು ಒತ್ತಾಯಿಸಿದರು.
ಕೋಟೆ ವಿಧಾನ ಸಭಾಂಗಣದ ಮೇಲ್ಛಾವಣಿ ದುರಸ್ತಿಯಲ್ಲಿರುವ ಬಗ್ಗೆ ಮತನಾಡಿದ ಸದಸ್ಯ ಶಶಿ ಸುಬ್ರಮಣಿ ಅವರು, ‘ಅಧ್ಯಕ್ಷರೆ ಸಭಾಂಗಣ ದೊಳಗಿರುವ ಎಲ್ಲರಿಗೂ ‘ಇನ್ಶೂರೆನ್ಸ್' ಮಾಡಿಸಿ ಏಕೆಂದರೆ ಸಭೆ ಮುಗಿಯುವದರೊಳಗೆ ಎಲ್ಲಿ ಏನಾಗುತ್ತದೋ ಗೊತ್ತಿಲ್ಲ ಎಂದು ಹಾಸ್ಯಭರಿತವಾಗಿಯೆ ಸಭೆಯ ಗಮನ ಸೆಳೆದರು. ಗಾಳಿಯ ರಭಸಕ್ಕೆ ಮೇಲ್ಛಾವಣಿ ಶೀಟುಗಳ ‘ದಡ- ಬಡ' ಸದ್ದು ಸಭೆಯುದ್ದಕ್ಕೂ ಆಗಿಂದಾಗ್ಗೆ ನೆರೆದಿದ್ದವರಲ್ಲಿ ನಡುಕ ಹುಟ್ಟಿಸುತ್ತಿತ್ತು. ಸಭೆಯಲ್ಲಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಉಪಸ್ಥಿತರಿದ್ದರು.
-ರಂಜಿತ್.