ಮಡಿಕೇರಿ, ಜೂ. 25 : ಇತ್ತೀಚೆಗೆ ಕುಂದಾಪುರದಲ್ಲಿ ನಡೆದ ಅವಘಡದಲ್ಲಿ ಮಕ್ಕಳು ದಾರುಣ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕೂಡ ನಿಯಮ ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದೊಯ್ಯುವ ವಾಹನಗಳ ವಿರುದ್ಧ ಕ್ರಮಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ. ಇದು ಸ್ವಾಗತಾರ್ಹವಾದರೂ ಕನಿಷ್ಟ 8 ಮಕ್ಕಳನ್ನು ಕರೆದೊಯ್ಯಲು ಅವಕಾಶ ನೀಡಬೇಕೆಂದು ಆಟೋ ರಿಕ್ಷಾ ಮಾಲೀಕರ ಮತ್ತು ಚಾಲಕರ ಸಂಘÀ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಹೆಚ್. ಮೇದಪ್ಪ, ಆಟೋ ರಿಕ್ಷಾಗಳಲ್ಲಿ 6 ವಿದ್ಯಾರ್ಥಿಗಳನ್ನು ಕರೆದೊಯ್ಯಲು ಸರ್ಕಾರದ ಆದೇಶವಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಅಶ್ವತ್ಥ್ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಾಧಿಕಾರದ ಸಭೆÉಯಲ್ಲಿ ಕೋರಿಕೆ ಮೇರೆಗೆ 8 ವಿದ್ಯಾರ್ಥಿಗಳನ್ನು ಕರೆದೊಯ್ಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇದೀಗ ಕುಂದಾಪುರದ ಘಟನೆಯ ನಂತರ 8 ಮಕ್ಕಳನ್ನು ಕರೆದೊಯ್ಯಲು ಅವಕಾಶವಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಮ್ಮೆ ಅಧಿಕಾರಿ ಗಳನ್ನು ಭೇಟಿಯಾಗಿ ವಿನಾಯಿತಿ ಕೋರಲಾಗುವದೆಂದು ಮೇದಪ್ಪ ಹೇಳಿದರು.
ಸರ್ಕಾರದ ಆದೇಶದಂತೆ 6 ಮಕ್ಕಳು ಅಥವಾ ಅದಕ್ಕಿಂತ ಕಡಿಮೆ ಮಕ್ಕಳನ್ನು ಕರೆದೊಯ್ಯಲು ಆಟೋ ರಿಕ್ಷಾ ಚಾಲಕರು ತಯಾರಿದ್ದಾರೆ. ಆದರೆ, ಈ ಕ್ರಮದಿಂದ ಪೋಷಕರಿಗೆ ಆರ್ಥಿಕ ಹೊರೆಯಾಗಲಿದೆಯೆಂದು ಅವರು ಅಭಿಪ್ರಾಯಪಟ್ಟರು. ಈ ಹಿಂದೆ ಪ್ರಾಧಿಕಾರದ ಸಭೆಯಲ್ಲಿ ನೀಡಿರುವ ರಿಯಾಯಿತಿಯಂತೆ 8 ಮಕ್ಕಳನ್ನು ಕರೆದೊಯ್ಯಲು ನಾವು ಬದ್ಧರಾಗಿದ್ದು, ಇದನ್ನು ಮೀರಿ ಅಧಿಕ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದೊಯ್ಯವ ಆಟೋ ರಿಕ್ಷಾಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳ ಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.
ಎಂಟಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆದೊಯ್ಯುವದು, ವಿದ್ಯಾರ್ಥಿಗಳನ್ನು ಕರೆದೊಯ್ಯುವ ಸಂದರ್ಭ ಆಟೋ ರಿಕ್ಷಾಗಳಲ್ಲಿ ಸ್ಪೀಕರ್ ಮೂಲಕ ಹಾಡುಗಳನ್ನು ಹಾಕುವದು ಮತ್ತು ಅತೀ ವೇಗವಾಗಿ ತೆರಳುವ ಆಟೋ ರಿಕ್ಷಾಗಳ ವಿರುದ್ಧ ಸಂಘವೇ ದೂರು ನೀಡಲಿದೆಯೆಂದು ಮೇದಪ್ಪ ತಿಳಿಸಿದರು. ಚಾಲಕರು ತಮ್ಮ ಜವಬ್ದಾರಿಯನ್ನು ಅರಿತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಿಯಮ ಗಳನ್ನು ಪಾಲಿಸುವದು ಸೂಕ್ತವೆಂದು ಅವರು ಮನವಿ ಮಾಡಿದರು.
ರಸ್ತೆ ಅವ್ಯವಸ್ಥೆ ವಿರುದ್ಧ ಅಸಮಾಧಾನ
ನಗರದಲ್ಲಿನ ರಸ್ತೆಗಳ ಅವ್ಯವಸ್ಥೆ ಬಗ್ಗೆ ಮಾತನಾಡಿದ ಮೇದಪ್ಪ ಮಹದೇವಪೇಟೆ ರಸ್ತೆ ಕಾಮಗಾರಿ ಯನ್ನು ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿದರು. ಹದಗೆಟ್ಟ ರಸ್ತೆಗಳು ಮತ್ತು ಅವ್ಯವಸ್ಥೆಯ ಚರಂಡಿ ಗಳಿಂದಾಗಿ ಮಕ್ಕಳನ್ನು ಕರೆದೊಯ್ಯವ ವಾಹನಗಳಿಗೂ ತೊಂದರೆಯಾಗಿದೆ. ಅಲ್ಲದೆ ಮಹದೇವಪೇಟೆ ರಸ್ತೆಯ ಕಾಮಗಾರಿಯಿಂದ ಆಟೋಗಳ ಓಡಾಟಕ್ಕೂ ಅಡಚಣೆÉಯಾಗಿ ಮತ್ತು ಆದಾಯ ಕುಂಠಿತವಾಗುತ್ತಿದೆಯೆಂದು ಆರೋಪಿಸಿದರು.
ಗಣಪತಿ ಬೀದಿಯಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲುಗಡೆ ಮಾಡುತ್ತಿರುವದರಿಂದ ವಾಹನ ದಟ್ಟಣೆÉ ಹೆಚ್ಚಾಗುತ್ತಿದೆ. ಆದ್ದರಿಂದ ಪೆÇಲೀಸರು ಏಕಮುಖ ಸಂಚಾರ ಕ್ರಮವನ್ನು ಜಾರಿಗೆ ತರಬೇಕೆಂದು ಮೇದಪ್ಪ ಒತ್ತಾಯಿಸಿದರು.
ಮಹದೇವಪೇಟೆ, ರಾಣಿಪೇಟೆ, ಮುತ್ತಪ್ಪ ದೇವಾಲಯ, ಭಗವತಿನಗರ ಹಾಗೂ ಕಾನ್ವೆಂಟ್ ರಸ್ತೆಗಳಲ್ಲಿ ವಾಹನಗಳನ್ನು ಓಡಾಡಿಸುವದೇ ಕಷ್ಟಸಾಧ್ಯವಾಗಿದೆಯೆಂದು ಮೇದಪ್ಪ ಅಸಹಾಯಕತೆ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಂ. ಪ್ರಸನ್ನ, ಉಪಾಧ್ಯಕ್ಷ ಬಿ.ಟಿ. ಸುಂದರ, ಮಡಿಕೇರಿ ಸಂಘದ ಅಧ್ಯಕ್ಷ ಎ. ಅರುಣ್ ಕುಮಾರ್, ಉಪಾಧ್ಯಕ್ಷ ಪಿ.ಆರ್. ಡೆನ್ನಿ ಹಾಗೂ ಪ್ರಧಾನ ಕಾರ್ಯದರ್ಶಿ ಬಾರನ ದಿನೇಶ್ ಉಪಸ್ಥಿತರಿದ್ದರು.