*ಗೋಣಿಕೊಪ್ಪಲು, ಜೂ. 21: ಒಂದೋ ಅನೆಯನ್ನು ಸ್ಥಳಾಂತರಿಸಿ ಅಥವಾ ಕೊಂದು ಬಿಡಿ ಎಂದು ಒತ್ತಾಯಿಸಿ ಈ ಭಾಗದ ಸಾರ್ವಜನಿಕರು ಪಟ್ಟಣವನ್ನು ಬಂದ್ ಮಾಡಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.
ಆನೆ ಧಾಳಿಗೆ ನಿರಂತರವಾಗಿ ಜೀವ ಹಾನಿ ಸಂಭವಿಸುತ್ತಿದೆ. ಅನಾಹುತ ತಡೆಯಲು ವ್ಯವಸ್ಥಿತ ಕಾರ್ಯಯೋಜನೆ ಮತ್ತು ಮುಂಜಾಗರೂಕತೆ ಕ್ರಮ ಕೈಗೊಳ್ಳಬೇಕೆಂದು ತಿತಿಮತಿ ವಿಭಾಗದ ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಒಂದು ಗಂಟೆಗಳ ಕಾಲ ತಿತಿಮತಿ ಪಟ್ಟಣವನ್ನು ಬಂದ್ ಮಾಡಿ ಪ್ರತಿಭಟನೆ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಮಂಗಳವಾರ ಸ್ತ್ರೀ ಶಕ್ತಿ ಸಂಘ, ಗ್ರಾಮಸ್ಥರು ಇನ್ನಿತರ ಸಂಘ-ಸಂಸ್ಥೆಗಳ ಪ್ರಮುಖರು ಪ್ರತಿಭಟನೆ ನಡೆಸಿದರು. ಪಟ್ಟಣದಿಂದ ಅರಣ್ಯ ಇಲಾಖೆ ಕಚೇರಿವರೆಗೆ ಮೆರವಣಿಗೆ ನಡೆಸಿ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಆನೆ ಧಾಳಿಯಿಂದ ಕಾರ್ಮಿಕರು, ಶಾಲಾ ಮಕ್ಕಳು ಜೀವ ಭಯದಿಂದ ಹಗಲು ರಾತ್ರಿ ಕಳೆಯುವಂತಾಗಿದೆ. ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸದೆ ಲಘುವಾಗಿ ಪರಿಗಣಿಸುತ್ತಿದ್ದಾರೆ ಎಂದು ಆರೋಪಿಸಿ ಎ.ಸಿ.ಎಫ್. ಸೂರ್ಯಸೇನ್ ಅವರ ಎದುರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಜಿ. ಬೋಪಯ್ಯ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಪಿ.ಸಿ.ಸಿ.ಎಫ್. ಹೊಸ್ಮಟ್ ಅವರಿಗೆ ದೂರವಾಣಿ ಕರೆಮಾಡಿ ಪ್ರತಿಭಟನೆ ಮಾಹಿತಿ ನೀಡಿದರು. ಕಂದಕದ ನಡುವೆ ಕಾಣಿಸಿಕೊಂಡ ಎರಡು ಸ್ಥಳಗಳಲ್ಲಿ ಬಂಡೆಗಳಿರುವ ಜಾಗದಲ್ಲಿ ರೈಲ್ವೆ ಕಂಬಿಗಳನ್ನು ಅಳವಡಿಸಬೇಕು ಎಂದು ತಿಳಿಸಿದರು. ಇದಕ್ಕೆ ಸಮ್ಮತಿಸಿದ ಹೊಸ್ಮಟ್ ಕೂಡಲೇ ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದರು. ನಂತರ ಮಾತನಾಡಿದ ಅವರು ಆನೆಯಿಂದ ಮನುಷ್ಯ ಜೀವ ಕಳೆದುಕೊಳ್ಳಬೇಕಾಗಿದೆ. ಅಧಿಕಾರಿಗಳು ಮೀನಾಮೇಷ ಎಣಿಸದೆ ಅರಣ್ಯದ ಸುತ್ತ ಕಂದಕ ನಿರ್ಮಿಸಿ ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು. ಸಣ್ಣ ವಿಚಾರಕ್ಕೂ ಮೇಲಾಧಿಕಾರಿಗಳ ಅಪ್ಪಣೆಗೆ ಕಾಯದೆ ತಾವೇ ಖುದ್ದು ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಈಗಾಗಲೇ ನಿರ್ಮಿತವಾದ ಕಂದಕದ ನಡುವೆ ಬಂಡೆಗಳು ಕಾಣಿಸಿಕೊಂಡಿವೆ. ಇದನ್ನು ತೆರವು ಮಾಡಿ ಆನೆ ಗ್ರಾಮಗಳಿಗೆ ಬಾರದಂತೆ ತಡೆ ಹಿಡಿಯಲು ಕಾಮಗಾರಿ ನಡೆಸಲು ಸನ್ನದ್ಧರಾಗ ಬೇಕು ಎಂದು ಆಗ್ರಹಿಸಿದರು. ಜಿ.ಪಂ. ಸದಸ್ಯೆ ಪಿ.ಆರ್. ಪಂಕಜ ಮಾತನಾಡಿ, ಅಧಿಕಾರಿಗಳು ಸುಮ್ಮನೆ ಕುಳಿತರೆ ಸಮಸ್ಯೆ ಬಗೆಹರಿಯುವದಿಲ್ಲ. ಜನರ ತಾಳ್ಮೆಗೆ ಒಂದು ಮಿತಿ ಇದೆ. ಆನೆಯನ್ನು ಗುಂಡು ಹಾಕಿ ಕೊಲ್ಲಲು ಅನುಮತಿ ನೀಡಿ, ಇಲ್ಲವೇ ಸ್ಥಳಾಂತರಿಸಲು ಅಧಿಕಾರಿಗಳು ಮುಂದೆ ಬನ್ನಿ ಎಂದು ಒತ್ತಾಯಿಸಿದರು. ಜನರ ಜೀವದ ಜೊತೆ ಆಟವಾಡದೆ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ರೈಲ್ವೆ ಹಳಿ ಕಂದಕ ನಿರ್ಮಾಣ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಮನುಷ್ಯನ ಜೀವವನ್ನು ಉಳಿಸಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಆನೆ ಧಾಳಿಯಿಂದ ಜೀವ ಹಾನಿ, ಬೆಳೆ ನಷ್ಟ ಸಂಭವಿಸುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯ ಮನುಷ್ಯನನ್ನು ಪ್ರಾಣಿ ಬಲಿತೆಗೆದುಕೊಳ್ಳುತ್ತಿದೆ. ಹೊರ ರಾಜ್ಯದಲ್ಲಿ ಹಿಡಿದ ಆನೆಗಳನ್ನು ನಾಗರಹೊಳೆ ಅರಣ್ಯಗಳಿಗೆ ಬಿಡಲಾಗುತ್ತಿದೆ ಎಂಬ ಅನುಮಾನವಿದೆ. ಈ ಕಾರಣವೇ ಅನೆಗಳ ಸಂಖ್ಯೆ ಹೆಚ್ಚಾಗಿ ಅನಾಹುತಗಳಿಗೆ ಕಾರಣವಾಗುತ್ತಿದೆ. ಆನೆ ಧಾಳಿಗೆ ಮತ್ತಷ್ಟು ಬಲಿ ಬೀಳುವ ಮೊದಲು ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದರು. ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಚೆಪ್ಪುಡಿರ ರಾಮಕೃಷ್ಣ ಮಾತನಾಡಿ, ಜನಸಾಮಾನ್ಯರು ಹರಕೆಯ ವಸ್ತುವೆಂದು ಪರಿಗಣಿಸಿರುವ ಇಲಾಖೆಯು ಕಾಡಾನೆಗಳಿಂದ ಆದ ಜೀವ ಹಾನಿ ಮತ್ತು ಬೆಳೆ ನಷ್ಟಕ್ಕೆ ಪರಿಹಾರದ ಚೆಕ್ ನೀಡಿ ಬಲಿಗಾಗಿ ಕಾತರಿಸುತ್ತಿದೆ. 1986 ರ ಕಟ್ಟಪೂರ ಕಾರ್ಯಾಚರಣೆಯಿಂದ ಪ್ರತಿಬಿಂಬಿಸಿ ಇಂದಿನ ತನಕ ನಿರಂತರ ನಾಗರಹೊಳೆ ರಾಷ್ಟೀಯ ಉದ್ಯಾನವನವೆಂದು ತಿತಿಮತಿ ಭಾಗಕ್ಕೆ ಸ್ಥಳಾಂತರಿಸಿದ ಪರಿಣಾಮವೇ ಈ ಮೇಲಿನ ದುರಂತಗಳಿಗೆ ಕಾರಣ. ಸರಕಾರದ ಯಾವದೇ ಯೋಜನೆಗಳಿಂದ ಕಾಡಾನೆಯ ಹಾವಳಿಯಿಂದ ನಿಯಂತ್ರಿಸಲು ಸಾಧ್ಯವಾಗುವದಿಲ್ಲ ಎಂದರು.
ತಿತಿಮತಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಪಂಚಾಯಿತಿ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿ ಕಾಡನೆ ಹಾವಳಿ ತೀವ್ರಗೊಂಡಿದೆ. ಕಾಡಾನೆಗಳಿಂದ ಜೀವ ಹಾನಿ ಬೆಳೆ ನಷ್ಟ ಸಂಭವಿಸುತ್ತಿದೆ. ಆದರೂ ಇಲಾಖೆ ಕ್ರಮ ಕೈಗೊಳ್ಳದೇ ಇರುವದು ಸಂಶಯಕ್ಕೆ ಎಡೆಮಾಡಿದೆ ಎಂದು ವಿಶಾದ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಗ್ರಾ.ಪಂ. ಸದಸ್ಯರಾದ ಅನೂಪ್, ವಿಜಯ್, ಶ್ರೀನಿವಾಸ್, ಮನು ನಂಜಪ್ಪ , ಬಿ.ಜೆ.ಪಿ. ತಾಲೂಕು ಅಧ್ಯಕ್ಷ ಪಟ್ರಪಂಡ ರಘು ನಾಣಯ್ಯ , ಪ್ರಮುಖರಾದ ಚೆಪ್ಪುಡಿರ ಮಾಚಯ್ಯ, ವಿನಯ್ ಕುಮಾರ್, ಅಧಿಕಾರಿಗಳಾದ ಎ.ಸಿ.ಎಫ್. ಶ್ರೀಪತಿ ಆರ್.ಎಫ್.ಓ. ಕಿರಣ್ ಕುಮಾರ್, ಗೋಪಾಲ್ ಹಾಜರಿದ್ದರು
- ಎನ್.ಎನ್. ದಿನೇಶ್