ಮಡಿಕೇರಿ, ಜೂ. 23: ಗುತ್ತಿಗೆ ಆಧಾರದ ನೇಮಕಾತಿ ಪದ್ಧತಿಯನ್ನು ಕೈಬಿಡುವದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಸರ್ಕಾರಿ ಆಸ್ಪತ್ರೆಗಳ ಸ್ವಚ್ಛತಾ ಸಿಬ್ಬಂದಿಗಳು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಿಬ್ಬಂದಿಗಳು ಸರಕಾರ ಸ್ವಚ್ಛತಾ ಸಿಬ್ಬಂದಿಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಡಿ ಗ್ರೂಪ್ ನೌಕರರನ್ನು ನೇಮಕಾತಿ ಮಾಡದೆ ಸ್ವಚ್ಛತಾ ಸಿಬ್ಬಂದಿಗಳನ್ನು ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆಯೆಂದು ಕೊಡಗು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಗಳ ಸಂಘದ ಅಧ್ಯಕ್ಷ ಪಿ.ಆರ್. ಭರತ್ ಆರೋಪಿಸಿದರು.

ಜಿಲ್ಲೆಯ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ, ಶನಿವಾರಸಂತೆ, ಗೊಣಿಕೊಪ್ಪ, ಪಾಲಿಬೆಟ್ಟ, ನಾಪೋಕ್ಲು, ಕುಶಾಲನಗರ, ಕುಟ್ಟ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ದುಡಿಯುತ್ತಿರುವ ಸ್ವಚ್ಛತಾ ಸಿಬ್ಬಂದಿಗಳು ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಆಡಳಿತ ವ್ಯವಸ್ಥೆ ಯಾವದೇ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಡಿ ಗ್ರೂಪ್ ನೌಕರರನ್ನು ನೇಮಕ ಮಾಡದೆ ಸ್ವಚ್ಛತಾ ಸಿಬ್ಬಂದಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ 15 ವರ್ಷಗಳ ಹಿಂದಿನ ಜನಸಂಖ್ಯೆಗೆ ಅನುಗುಣವಾಗಿ 31 ಮಂದಿ ಡಿ ಗ್ರೂಪ್ ನೌಕರರು ಇರಬೇಕಾಗಿತ್ತು. ಆದರೆ, ಕೇವಲ 5 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಇವರು ಕೂಡ ನಿವೃತ್ತಿಯ ದಿನಗಳನ್ನು ಎಣಿಸುತ್ತಿದ್ದಾರೆ. ವೀರಾಜಪೇಟೆ ಆಸ್ಪತ್ರೆಯಲ್ಲಿ 20 ಮಂದಿ ಡಿ ಗ್ರೂಪ್ ನೌಕರರಿಗೆ ಬದಲಾಗಿ ಕೇವಲ 6 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಇದ್ದು, ಸರ್ಕಾರ ಕೇವಲ ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಕ ಮಾಡಿ, ಕೆಲಸದ ಒತ್ತಡವನ್ನು ಹೇರುತ್ತಿದೆ ಯೆಂದು ಭರತ್ ಆರೋಪಿಸಿದರು.

ಸಂಘದ ಕಾರ್ಯದರ್ಶಿ ಹೆಚ್.ಕೆ.ಜಾನಕಿ, ಉಪಾಧ್ಯಕ್ಷೆ ರಾಜಿನಿ, ಪದಾಧಿಕಾರಿ ಸದಾಶಿವ ಸೇರಿದಂತೆ ಜಿಲ್ಲೆಯ ವಿವಿಧ ಆಸ್ಪತ್ರೆಗಳ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.

ಬೇಡಿಕೆಗಳು

ಆಸ್ಪತ್ರೆಯ ಮೂಲಕವೆ ಸಿಬ್ಬಂದಿಗಳಿಗೆ ವೇತನ ನೀಡಬೇಕು, ಡಿ ಗ್ರೂಪ್ ನೌಕರರ ಸಂಖ್ಯೆಗೆ ಅನುಗುಣ ವಾಗಿ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಿಸಬೇಕು, ವರ್ಷಕ್ಕೆ 2 ಜೊತೆ ಸಮವಸ್ತ್ರ, ಗ್ಲೌಸ್, ರೈನ್ ಕೋಟ್, ಶೂ ಮತ್ತಿತರ ಸಾಮಗ್ರಿಗಳನ್ನು ನೀಡಬೇಕು, ವೇತನವನ್ನು 5ನೇ ತಾರೀಖಿನ ಒಳಗೆ ವಿತರಿಸಬೇಕು, ಪಿಎಫ್‍ನ್ನು ಪಾವತಿಸದ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಜಿಲ್ಲೆಯಲ್ಲಿರುವ ಎಲ್ಲಾ ಸ್ವಚ್ಛತಾ ಸಿಬ್ಬಂದಿಗಳನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸಿ ಖಾಯಂ ಗೊಳಿಸಬೇಕೆಂದು ಸಂಘ ಒತ್ತಾಯಿಸಿದೆ.