ಮಡಿಕೇರಿ, ಜೂ. 24: ಮಡಿಕೇರಿ ನಗರದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಬರುವ ಕೆ. ನಿಡುಗಣೆ ಗ್ರಾಮದ ಪೈಸಾರಿ ಜಾಗದಲ್ಲಿ ಉದ್ದೇಶಿಸಿರುವ ಬಡಾವಣೆಯ ನಿರ್ಮಾಣದ ಪ್ರಸ್ತಾವನೆಯನ್ನು ಕೈ ಬಿಡುವಂತೆ ಇಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ಇಂದು ಪ್ರಾಧಿಕಾರದ ಅಧ್ಯಕ್ಷೆ ಸುರಯ್ಯ ಅಬ್ರಾರ್ ಅವರ ಅಧ್ಯಕ್ಷತೆಯಲ್ಲಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಕೆ. ನಿಡುಗಣೆ ಗ್ರಾಮದ ಸರ್ವೇ ನಂ. 1/13ಪಿ3ರಲ್ಲಿ ಅಂದಾಜು 61.78 ಎಕರೆ ಪೈಸಾರಿ ಜಾಗವಿದ್ದು, ಈ ಪೈಕಿ 11.80 ಎಕರೆ ವಿಸ್ತೀರ್ಣದ ಜಾಗದಲ್ಲಿ ಪ್ರಾಧಿಕಾರದಿಂದ ಬಡಾವಣೆ ನಿರ್ಮಾಣ ಮಾಡಲು ಕಳೆದ ಬಾರಿಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಗ್ಗೆ ಗ್ರಾ.ಪಂ.ನಿಂದ ಕೇಳಿ ಬಂದ ಅಪಸ್ವರದ ಹಿನ್ನೆಲೆಯಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಬಡಾವಣೆ ನಿರ್ಮಾಣ ಮಾಡುವದರಿಂದ ಸಮಸ್ಯೆಯಾಗಲಿದೆ. ಗ್ರಾ.ಪಂ. ಕೂಡ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಕೈ ಬಿಡುವದರೊಂದಿಗೆ ಬೇರೆಡೆಯಲ್ಲಿ ಜಾಗ ಗುರುತಿಸುವಂತೆ ಸಲಹೆ ನೀಡಿದರು.

ವಾಣಿಜ್ಯ ಕಟ್ಟಡ ನಿರ್ಮಿಸಲು ನೀಡಿರುವ ತಾಂತ್ರಿಕ ಅನುಮೋದನೆಯಲ್ಲಿ ವಾಹನ ನಿಲುಗಡೆ ಮತ್ತು ಪಾರ್ಕಿಂಗ್‍ಗಾಗಿ ಜಾಗವನ್ನು ಕಾಯ್ದಿರಿಸಿರುವಂತೆ ಸೂಚಿಸಲಾಗಿತ್ತು.

ಜಾಗವನ್ನು ಬಿಡದೆ ನಕ್ಷೆಯನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವದು ಹಾಗೂ ನಿರ್ಮಿಸುತ್ತಿರುವದು ಕಂಡು ಬಂದಿದೆ. ಇಂತಹ ಕಟ್ಟಡವನ್ನು ವಶಕ್ಕೆ ಪಡೆದುಕೊಳ್ಳಿ ಎಂದು ಶಾಸಕರಾದ ಅಪ್ಪಚ್ಚುರಂಜನ್ ಹಾಗೂ ಕೆ.ಜಿ. ಬೋಪಯ್ಯ ಅಧ್ಯಕ್ಷರಿಗೆ ಹೇಳಿದರು. ಈ ಬಗ್ಗೆ ಕ್ರಮಕೈಗೊಳ್ಳುವದಾಗಿ ಅಧ್ಯಕ್ಷೆ ಸುರಯ್ಯ ಅಬ್ರಾರ್ ಭರವಸೆ ನೀಡಿದರು.

ನಗರದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ಅಪ್ಪಚ್ಚುರಂಜನ್ ತಿಳಿಸಿದರು. ಕ್ರಮಕೈಗೊಳ್ಳುವಂತೆ ಅಧ್ಯಕ್ಷೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಮೂಡಾ ಆಯುಕ್ತ ಬಿ.ಪಿ. ರಾಜಶೇಖರ್, ನಗರಸಭಾ ಆಯುಕ್ತೆ ಬಿ.ಬಿ. ಪುಷ್ಪಾವತಿ, ಇಂಜಿನಿಯರ್ ಪ್ರಸನ್ನಕುಮಾರ್ ಹಾಗೂ ಇನ್ನಿತರರು ಇದ್ದರು.