ಕುಶಾಲನಗರ, ಜು. 1: ಕೊಡಗು ಜಿಲ್ಲಾ ನೂತನ ಉಸ್ತುವಾರಿ ಸಚಿವರಾದ ಎಂ.ಆರ್. ಸೀತರಾಂ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ದಿನೇಶ್ ಗುಂಡೂರಾವ್ ಶುಕ್ರವಾರ ಜಿಲ್ಲೆಗೆ ಆಗಮಿಸಿದ ಸಂದರ್ಭ ಕೊಪ್ಪ ಗೇಟ್ ಬಳಿ ಜಿಲ್ಲಾಡಳಿತ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಜಿಲ್ಲಾಧಿಕಾರಿ ಡಾ. ಆರ್.ವಿ. ಡಿಸೋಜ, ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್, ಉಪವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ತಾಲೂಕು ತಹಶೀಲ್ದಾರ್ ಬಿ.ಸಿ. ಶಿವಪ್ಪ ಉಸುವಾರಿ ಸಚಿವರನ್ನು ಜಿಲ್ಲೆಯ ಗಡಿಭಾಗದಲ್ಲಿ ಬರಮಾಡಿಕೊಂಡರು.
ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರ ಸ್ವಾಗತ ಸ್ವೀಕರಿಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಪಕ್ಷದ ವರಿಷ್ಠರ ನಿರ್ಧಾರದಂತೆ ದೊರೆತಿರುವ ನೂತನ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಮುಂದಿನ ಚುನಾವಣೆಗೆ ಪಕ್ಷವನ್ನು ಬಲಪಡಿಸುವತ್ತ ಚಿಂತಿಸಲಾಗುವದು. ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಕೂಡ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವದು ಎಂದರು.
ಪಕ್ಷದಲ್ಲಿ ಯಾವದೇ ರೀತಿಯ ಭಿನ್ನಮತ ಇಲ್ಲ. ಎಲ್ಲರೂ ಕೂಡ ಒಗ್ಗಟ್ಟಾಗಿದ್ದೇವೆ. ಮಂತ್ರಿ ಮಂಡಲ ಪುನರ್ರಚನೆಯ ಸಂದರ್ಭ ಕೆಲವು ಬದಲಾವಣೆಗಳು ಸಹಜ. ಇದರಿಂದ ಕೆಲವರಲ್ಲಿ ಸಹಜವಾಗಿ ನಿರಾಸೆ ಉಂಟಾಗಿದ್ದು ಪಕ್ಷದ ವರಿಷ್ಠರು ಹಾಗೂ ಮುಖಂಡರ ಸಮ್ಮುಖದಲ್ಲಿ ಇದನ್ನು ಬಗೆಹರಿಸಿಕೊಳ್ಳಲಿದ್ದೇವೆ ಹೊರತು ಯಾವದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆಗಳು ನಡೆಯುತ್ತಿಲ್ಲ ಎಂದರು.
ಬಿಜೆಪಿ ಪಕ್ಷದ ಪ್ರಮುಖರು ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಬಗ್ಗೆ ನೀಡುತ್ತಿರುವ ಹೇಳಿಕೆಗಳು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವಾಗಿದೆ. ಜನರ ನಿರ್ಧಾರವೇ ಅಂತಿಮ ನಿರ್ಧಾರ ಹೊರತು ನಾಯಕರ ನಿರ್ಧಾರಕ್ಕೆ ಒತ್ತು ನೀಡಲು ಸಾಧ್ಯವಿಲ್ಲ ಎಂದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಲಿದ್ದೇವೆ ಎಂದು ದಿನೇಶ್ ಗುಂಡೂರಾವ್ ಪ್ರಶ್ನೆಯೊಂದಕ್ಕೆ ಸಮಜಾಯಿಷಿಕೆ ನೀಡಿದರು.
ಸ್ವಾಗತ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನೂತನ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ, ತನಗೆ ಕೊಡಗು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅರಿವಿನ ಕೊರತೆಯಿದೆ. ಹಿಂದಿನ ಉಸ್ತುವಾರಿ ಸಚಿವರ ಸಹಾಯದೊಂದಿಗೆ ಕೊಡಗು ಜಿಲ್ಲೆಯಲ್ಲಿ ಜನಸಂಪರ್ಕ ಸಭೆ, ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆಹಾಕಿ ಮುಂದಿನ ದಿನಗಳಲ್ಲಿ ಕಾರ್ಯಸೂಚಿ ಹಮ್ಮಿಕೊಳ್ಳಲಾಗುವದೆಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೂಡಾ ಅಧ್ಯಕ್ಷ ಎಸ್.ಎನ್. ನರಸಿಂಹಮೂರ್ತಿ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್, ಪ್ರಮುಖರಾದ ಮಿಟ್ಟು ಚಂಗಪ್ಪ, ಬಿ.ಟಿ. ಪ್ರದೀಪ್, ಲೋಕೇಶ್ ಕುಮಾರ್, ಕೆ.ಕೆ. ಮಂಜುನಾಥ್ ಕುಮಾರ್, ಕುಮುದ ಧರ್ಮಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಮಂಜುನಾಥ್ ಗುಂಡುರಾವ್, ಸ್ಥಳೀಯ ಪಟ್ಟಣ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಸಚಿವರನ್ನು ಸ್ವಾಗತಿಸಿದರು.
ಬಲಿಜ ಸಂಘದ ವೀರಾಜಪೇಟೆ ತಾಲೂಕು ಪ್ರಮುಖರು, ಕುಶಾಲನಗರದ ಕಾರ್ಯಕರ್ತರು ಸಚಿವರಿಗೆ ಮಾಲಾರ್ಪಣೆಗೈದು ಸ್ವಾಗತಿಸಿದರು.