ಸೋಮವಾರಪೇಟೆ, ಜೂ. 19: ಪ್ರಸಕ್ತ ಸಾಲಿನಲ್ಲಿ ಜರುಗಿದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಕಾವಲು ಪಡೆ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಕೃಷ್ಣ ಹೇಳಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಅಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015-16ನೇ ಸಾಲಿನ ಎಸ್‍ಎಸ್‍ಎಲ್‍ಸಿ ಅಂತಿಮ ಪರೀಕ್ಷೆಯಲ್ಲಿ 125ಕ್ಕೆ 120 ಕ್ಕಿಂತಲೂ ಹೆಚ್ಚು ಹಾಗೂ ಪಿಯುಸಿಯಲ್ಲಿ 100ಕ್ಕೆ 95ಕ್ಕಿಂತಲೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು, ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ವಿದ್ಯಾರ್ಥಿಗಳ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ, ಕನ್ನಡ ಶಿಕ್ಷಕರ ಹೆಸರು ಹಾಗೂ ವಿಳಾಸ, ಇತ್ತೀಚಿನ ಭಾವಚಿತ್ರದೊಂದಿಗೆ ಪಾಂಶುಪಾಲರು ಅಥವಾ ಮುಖ್ಯ ಶಿಕ್ಷಕರಿಂದ ದೃಢೀಕರಿಸಿದ ಅಂಕಪಟ್ಟಿ ಪ್ರತಿಯೊಂದಿಗೆ ಜೂನ್ 25ರ ಶನಿವಾರದೊಳಗೆ ಅರ್ಜಿ ಸಲ್ಲಿಸಬಹುದು ಎಂದರು.

ಕನ್ನಡವನ್ನು ರಾಜ್ಯದಲ್ಲಿ ಉಳಿಸಿ ಬೆಳೆಸುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಕಾವಲು ಪಡೆ ಘಟಕದ ವತಿಯಿಂದ ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಲಾಗುವದು. ಹೆಚ್ಚಿನ ಮಾಹಿತಿಗಾಗಿ ಮೊ: 9448528625, 9449699776ನ್ನು ಸಂಪರ್ಕಿಸಬಹುದು ಎಂದರು. ಜಿಲ್ಲೆಯ 30 ಸರ್ಕಾರಿ ಶಾಲೆಗಳನ್ನು ಪ್ರಸಕ್ತ ಸಾಲಿನಲ್ಲಿ ಮುಚ್ಚುತ್ತಿರುವದು ದುರದೃಷ್ಟಕರ. ಸರ್ಕಾರಿ ಶಾಲೆಗಳಿಗೆ ಸೂಕ್ತ ಮೂಲಭೂತ ಸೌಲಭ್ಯವನ್ನು ಕಲ್ಪಿಸಿ, ಉತ್ತಮ ಶಿಕ್ಷಣ ನೀಡಿದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಹಾಜರಾಗುತ್ತಿದ್ದರು. ಹೆಚ್ಚಿನವರಿಗೆ ಸರ್ಕಾರಿ ನೌಕರಿ ಬೇಕಿದೆ. ಆದರೆ, ತಮ್ಮ ಮಕ್ಕಳನ್ನು ಮಾತ್ರ ಖಾಸಗಿ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಎಲ್ಲಾ ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ಓದಿಸುವಂತೆ ಸರ್ಕಾರ ಕಾನೂನು ಮಾಡಿದಲ್ಲಿ ಸರ್ಕಾರಿ ಶಾಲೆಗಳಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

ಗೋಷ್ಠಿಯಲ್ಲಿ ಕಾವಲು ಪಡೆ ಜಿಲ್ಲಾ ಘಟಕದ ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಎಚ್.ಎಚ್. ಕುಮಾರ, ಸದಸ್ಯ ಅಬ್ದುಲ್ ಸುಕ್ಕೂರ್, ತಾಲೂಕು ಘಟಕದ ಅಧ್ಯಕ್ಷ ಅರುಣ್ ಪೂಜಾರಿ, ಗೌರವಾಧ್ಯಕ್ಷ ಶೇಷಪ್ಪ, ಪದಾಧಿಕಾರಿ ರವೀಂದ್ರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.