ಮಡಿಕೇರಿ, ಜೂ. 24: ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳದಿಂದ ಸಾವು-ನೋವುಗಳು ಸಂಭವಿಸುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳದ ರಾಜ್ಯ ಅರಣ್ಯ ಸಚಿವ ರಮಾನಾಥ ರೈ ಅವರು ನಿಷ್ಕ್ರಿಯ ಸಚಿವರಾಗಿದ್ದಾರೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾ ಕಾರ್ಯಾಧ್ಯಕ್ಷ ಸಂಕೇತ್ ಪೂವಯ್ಯ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ಪುನರ್ ರಚನೆ ಸಂದರ್ಭ ನಿಷ್ಕ್ರಿಯರಾಗಿರುವ ಅರಣ್ಯ ಸಚಿವ ರಮಾನಾಥ್ ರೈ ಅವರನ್ನು ಕೂಡ ಕೈಬಿಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅರಣ್ಯ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಅಥವಾ ಖಾತೆಯನ್ನು ಬದಲಾಯಿಸಬೇಕೆಂದು ಒತ್ತಾಯಿಸುವದಾಗಿ ತಿಳಿಸಿದರು.
ಇತ್ತೀಚೆಗೆ ಜಿಲ್ಲಾ ಜೆಡಿಎಸ್ ಪ್ರಮುಖರು ಅರಣ್ಯ ಸಚಿವರನ್ನು ಭೇಟಿಯಾದ ಸಂದರ್ಭ ಬೇಜವಾಬ್ದಾರಿತನದ ವರ್ತನೆ ತೋರಿದ್ದಾರೆ. ಅಲ್ಲದೆ ಅಧಿಕಾರಿಗಳು ಕೂಡ ಕಾಡಾನೆಗಳನ್ನು ಓಡಿಸುತ್ತಿದ್ದೇವೆ ಎಂದು ಹೇಳಿಕೊಂಡು ಪ್ರಚಾರವನ್ನು ಪಡೆಯುತ್ತಿದ್ದಾರೆ. ಅರಣ್ಯ ಇಲಾಖೆ ಕಾಡಾನೆ ಉಪಟಳವನ್ನು ತಡೆಯಲು ಎಲ್ಲೂ ವೈಜ್ಞಾನಿಕ ಕ್ರಮವನ್ನು ಅನುಸರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಡಾನೆಗಳ ಹಾವಳಿಯೇ ಇಲ್ಲದ ಚೆಯ್ಯಂಡಾಣೆ, ನಾಪೋಕ್ಲು ವ್ಯಾಪ್ತಿಯಲ್ಲಿ ಕೂಡ ಕಾಡಾನೆಗಳು ಕಾಣಿಸಿಕೊಳ್ಳಲು ಆರಂಭವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ. ತಿತಿಮತಿ ಭಾಗದಲ್ಲಿ ಹಗಲಿನಲ್ಲೇ ಕಾಡಾನೆಗಳು ಕಾಣಿಸಿಕೊಳ್ಳುತ್ತಿದ್ದು, ಜಿಲ್ಲಾ ವ್ಯಾಪಿ ಸಾವು-ನೋವುಗಳು ಸಂಭವಿಸುತ್ತಿವೆ. ಮೃತರ ಕುಟುಂಬಕ್ಕೆ 2 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಿ ಇಲಾಖೆ ಪ್ರಚಾರವನ್ನಷ್ಟೇ ಪಡೆಯುತ್ತಿದೆ ಎಂದು ಆರೋಪಿಸಿದರು.
ಸದ್ಯದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅರಣ್ಯ ಸಚಿವರ ವಿರುದ್ಧ ದೂರು ನೀಡಲಾಗುವದು. ಇದಕ್ಕೆ ಸೂಕ್ತ ಸ್ಪಂದನ ದೊರೆಯದಿದ್ದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವದೆಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರನ್ನು ಆಗ್ಗಿಂದಾಗೆ ಬದಲಾಯಿಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದÀ ಸಂಕೇತ್ ಪೂವಯ್ಯ ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವು ಇರುವÀವರಿಗೆ ಉಸ್ತುವಾರಿ ಜವಾಬ್ದಾರಿಯನ್ನು ನೀಡುವದು ಸೂಕ್ತವೆಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ವೀಣಾ ಅಚ್ಚಯ್ಯ ಅವರಿಗೆ ಸಚಿವ ಸ್ಥಾನವನ್ನು ನೀಡಿ ಉಸ್ತುವಾರಿ ಸಚಿವರನ್ನಾಗಿ ಮಾಡಬಹುದಾಗಿತ್ತು ಎಂದು ತಿಳಿಸಿದ ಸಂಕೇತ್ ಪೂವಯ್ಯ, ಇದೀಗ ನೇಮಕವಾಗಿರುವ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ಬೆಳೆಗಾರರು ಜೀವನಕ್ಕಾಗಿ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವದಕ್ಕಾಗಿ ಹೋಂ ಸ್ಟೇ, ಎಸ್ಟೇಟ್ ಸ್ಟೇ ಗಳ ಮೇಲೆ ಅವಲಂಭಿತರಾಗಿದ್ದಾರೆ. ಇದಕ್ಕೆ ಪ್ರವಾಸೋದ್ಯಮ ಇಲಾಖೆ ಪ್ರೋತ್ಸಾಹ ನೀಡಬೇಕು. ಜಿಲ್ಲೆಯಲ್ಲಿರುವ ಶೇ. 10 ರಷ್ಟು ಅಕ್ರಮ ಹೋಂ ಸ್ಟೇಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಕೇತ್ ಪೂವಯ್ಯ ಆಗ್ರಹಿಸಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಆರ್. ಸುರೇಶ್, ಪ್ರಮುಖರಾದ ಸಿ.ಎ. ನಾಸಿರ್, ಆರ್.ಎ. ಸಕ್ಲೆನ್, ಪಿ.ವಿ. ರೆನ್ನಿ ಹಾಗೂ ಪ.ಪಂ. ಸದಸ್ಯ ಎಸ್.ಹೆಚ್. ಮತೀನ್ ಉಪಸ್ಥಿತರಿದ್ದರು.