ಮಡಿಕೇರಿ, ಜೂ. 20: ಸುಂಟಿಕೊಪ್ಪ ಹೋಬಳಿ ಗ್ರಾಮಗಳಾದ ಅತ್ತೂರು ನಲ್ಲೂರು, ಕಂಬಿಬಾಣೆ, ಕೊಡಗರಹಳ್ಳಿ, ನಾಕೂರು ಶಿರಂಗಾಲ, ಮಳೂರು, ಹೇರೂರು, ಗರಗಂದೂರು, ಚೆಟ್ಟಳ್ಳಿ, ಅಭ್ಯತ್ಮಂಗಲ ಗ್ರಾಮಗಳಲ್ಲಿ ಆನೆಗಳ ಹಾವಳಿ ಮಿತಿ ಮೀರಿದೆ.
ಕಾಫಿ ತೋಟ, ಭತ್ತದ ಗದ್ದೆಗಳಲ್ಲಿ ಬೆಳೆದ ಗಿಡ, ಬಳ್ಳಿ, ಭತ್ತದ ಪೈರು ಇತ್ಯಾದಿಗಳನ್ನು ನಾಶಪಡಿಸಿ ರೈತರಿಗೆ ನಷ್ಟ ಉಂಟು ಮಾಡುತ್ತಿದೆ. ಬಾಳೆ, ಅಡಿಕೆ ಗಿಡಗಳನ್ನು ಕಿತ್ತು ನಾಶಪಡಿಸುತ್ತಿದೆ. ರೈತರ ಬೇಲಿ, ಮನೆ, ನೀರಿನ ಟ್ಯಾಂಕ್ಗಳನ್ನು ಹಾನಿ ಪಡಿಸುತ್ತಿದೆ. ಕೂಲಿ ಕಾರ್ಮಿಕರ ಅಭಾವ ಹೆಚ್ಚಾಗಿದ್ದು, ಇರುವ ಕೂಲಿ ಕಾರ್ಮಿಕರು ಆನೆಗಳ ಹಾವಳಿಗೆ ಹೆದರಿ ಕೆಲಸಕ್ಕೆ ಬರುತ್ತಿಲ್ಲ. ರೈತ ಹಲವಾರು ವರ್ಷ ಕಷ್ಟಪಟ್ಟು ಬೆಳೆಸಿದ ಕಾಫಿಗಿಡ ಮತ್ತು ಹಣ್ಣಿನ ಮರಗಳನ್ನು ಒಂದೇ ದಿವಸದಲ್ಲಿ ನಾಶಪಡಿಸುತ್ತಿದೆ. ಶಾಲಾ ಮಕ್ಕಳು ಶಾಲೆಗೆ ಹೋಗಲು ಭಯಪಡುತ್ತಾರೆ. ಸಂಜೆ 6 ಗಂಟೆಯಿಂದ ಮುಂಜಾನೆ 6 ಗಂಟೆವರೆಗೆ ವಾಹನ ಚಾಲನೆ ಮಾಡಲು ವಾಹನ ಚಾಲಕರು ಹೆದರುತ್ತಾರೆ. ಈ ಹಿಂದೆ ಅನೇಕ ಸಾವು ನೋವು ಸಂಭವಿಸಿದ್ದು, ಜನರೇ ಆತಂಕದಿಂದ ಜೀವನ ಸಾಗಿಸಬೇಕಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.ಮದಗಜಗಳನ್ನು ನಾಗರಹೊಳೆಯಂತಹ ಅರಣ್ಯಕ್ಕೆ ಸ್ಥಳಾಂತರಿಸಿ, ಹೆಚ್ಚಾಗುತ್ತಿರುವ ಸಂತತಿಗಳನ್ನು ಕಡಿಮೆ ಮಾಡಿ ರೈತಾಪಿ ವರ್ಗಕ್ಕೆ, ಕೂಲಿ ಕಾರ್ಮಿಕರಿಗೆ, ವಾಹನ ಚಾಲಕರಿಗೆ, ದಾರಿಹೋಕರಿಗೆ, ಶಾಲಾ ಮಕ್ಕಳಿಗೆ ನಿರ್ಭಯವಾಗಿ ಓಡಾಡಲು ಅವಕಾಶ ಮತ್ತು ಸೂಕ್ತ ರಕ್ಷಣೆ ಮಾಡಿಕೊಡಬೇಕಾಗಿ ಮನವಿ ಮಾಡಿದ್ದಾರೆ.