ಬಲಮುರಿ, ಜೂ.18: ಕಾವೇರಿ ನದಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸೇವಾ ಸಂಸ್ಥೆ ಯಾದ ರೋಟರಿ ಸಂಪೂರ್ಣವಾಗಿ ಕೈಜೋಡಿಸಲಿದೆ ಎಂದು ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಕೆ.ಬಿ. ಸತೀಶ್ ಪೂಣಚ್ಚ ಭರವಸೆ ನೀಡಿದ್ದಾರೆ.

ಅವರು ಕಾವೇರಿ ನದಿ ಬಚಾವೋ ಆಂದೋಲನದ ಪಾದಯಾತ್ರೆಯ 4ನೇ ದಿನ ತಂಡವನ್ನು ಬಲಮುರಿ ಕ್ಷೇತ್ರದಲ್ಲಿ ಸ್ವಾಗತಿಸಿದ ಬಳಿಕ ನಡೆದ ಸರಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ‘ಜೀವನದಿ ಕಾವೇರಿ’ ಸಂರಕ್ಷಣೆಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡಂತೆ ನದಿ ತಟಗಳಲ್ಲಿ ಶಿಬಿರ ಏರ್ಪಡಿಸಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುವದು ಎಂದ ಅವರು ಕಾವೇರಿ ನದಿ ಸ್ವಚ್ಛತಾ ಆಂದೋಲನದ ಮೂಲಕ ನಡೆಯುತ್ತಿರುವ ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಬಲಮುರಿ ಅಗಸ್ತೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಯು. ತಮ್ಮಯ್ಯ, ಕಾವೇರಿ ನದಿ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ದಂಧೆಯ ಬಗ್ಗೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಮರಳು ಸಾಗಾಟ ಮೂಲಕ ಕಾವೇರಿ ನದಿ ಸಂಪೂರ್ಣ ಬರಡಾಗುತ್ತಿದೆ. ನಾಗರಿಕರು ಈ ಬಗ್ಗೆ ಎಚ್ಚೆತ್ತುಕೊಳ್ಳ ಬೇಕಾಗಿದೆ ಎಂದು ಅವರು ಮನವಿ ಮಾಡಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಯಾತ್ರೆಯ ಉದ್ದೇಶ ಹಾಗೂ ವಿವರಗಳ ಬಗ್ಗೆ ಮಾಹಿತಿ ಒದಗಿಸಿ, ನದಿ ತಟಗಳ ವಾಸ್ತವ ಸ್ಥಿತಿಗತಿಗಳ ಬಗ್ಗೆ ದಾಖಲೆ ಸಂಗ್ರಹಿಸಿ ರಾಜ್ಯ ಹಾಗೂ ಕೇಂದ್ರ ಸರಕಾರಗಳ ಗಮನಕ್ಕೆ ತರಲಾಗುವದು ಎಂದರು. ಕಾವೇರಿ ಬಚಾವೋ ಆಂದೋಲನ ಪಾದಯಾತ್ರೆ ತಂಡದ ನೇತೃತ್ವ ವಹಿಸಿರುವ ಶ್ರೀ ರಮಾನಂದ ಸ್ವಾಮೀಜಿ ಅವರನ್ನು ರೋಟರಿ ಮಿಸ್ಟಿ ಹಿಲ್ಸ್ ಪರವಾಗಿ ಗೌರವಿಸಲಾಯಿತು. ಈ ಸಂದರ್ಭ ರೋಟರಿ ಕಾರ್ಯದರ್ಶಿ ಪಿ.ಎಸ್. ಮಧು ಸೂದನ್, ಸದಸ್ಯ ಎಂ.ಯು ಮಹೇಶ್, ಪಾದಯಾತ್ರೆ ತಂಡದ ಪ್ರಮುಖಕರಾದ ಡಿ.ಆರ್. ಸೋಮಶೇಖರ್, ಬಿ.ಎಂ. ಲತೀಶ್ ಮತ್ತಿತರರು ಇದ್ದರು. ಪಾದಯಾತ್ರೆ ತಂಡ ಶನಿವಾರ ಕೊಂಡಂಗೇರಿ ಮೂಲಕ ಮರಗೋಡು ಮಾರ್ಗವಾಗಿ ನೆಲ್ಲಿಹುದಿಕೇರಿಯತ್ತ ಸಾಗಿದೆ.