ಮಡಿಕೇರಿ, ಜೂ. 17 : ಗೋಣಿಕೊಪ್ಪಲು ಗ್ರಾ. ಪಂ. ವ್ಯಾಪ್ತಿಯ ಕೀರೆಹೊಳೆಯ ಹೂಳೆತ್ತುವ ಕಾಮಗಾರಿ ನಿಯಮ ಬಾಹಿರವಾಗಿ ನಡೆಯುತ್ತಿದ್ದು, ಇದನ್ನು ತನಿಖೆಗೆ ಒಳಪಡಿಸಬೇಕೆಂದು ಗೋಣಿಕೊಪ್ಪ ಬಿಜೆಪಿ ಸ್ಥಾನೀಯ ಸಮಿತಿ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡ ಹಾಗೂ ತಾ.ಪಂ. ಮಾಜಿ ಅಧ್ಯಕ್ಷ ವಿ.ಎ. ವೆಂಕಟೇಶ್ ಗ್ರಾ. ಪಂ. ಮೊದಲ ಸಾಮಾನ್ಯ ಸಭೆ ನಡೆಯುವ ಮೊದಲೇ ಟೆಂಡರ್ ಪ್ರಕ್ರಿಯೆ ಕೂಡ ನಡೆಸದೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಸರಕಾರದ ಅನುದಾನವನ್ನು ಪೋಲು ಮಾಡಲಾಗುತ್ತಿದೆ. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ಗ್ರಾ. ಪಂ. ಪಿಡಿಓ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ತಾ. 21 ರಂದು ಸಾಮಾನ್ಯ ಸಭೆ ನಿಗದಿಯಾಗಿದ್ದು, ಸಭೆಯಲ್ಲಿ ಸದಸ್ಯರ ಅಭಿಪ್ರಾಯ ಪಡೆಯದೆ ತರಾತುರಿಯಲ್ಲಿ ಮೂರು ದಿನಗಳ ಹಿಂದೆ ಕಾಮಗಾರಿಯನ್ನು ಆರಂಭಿಸಲಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿಯ ವಿರೋಧವಿಲ್ಲ, ಆದರೆ ಕಾನೂನು ಉಲ್ಲಂಘಿಸಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ಆಕ್ಷೇಪವಿದೆ ಎಂದು ವೆಂಕಟೇಶ್ ಸ್ಪಷ್ಟಪಡಿಸಿದರು. ಅನುದಾನ ದುರ್ಬಳಕೆಯಾಗುವ ಸಾಧ್ಯತೆಗಳಿದೆ ಎಂದು ಆರೋಪಿಸಿದ ಅವರು ಈ ಕಾಮಗಾರಿ ಕುರಿತು ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಮೂಲಕ ಸೂಕ್ತ ತನಿಖೆ ನಡೆಯಬೇಕು ಮತ್ತು ಬಿಲ್ ತಡೆ ಹಿಡಿಯಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸಿಗರ ಒತ್ತಡದಿಂದ ಕಾಮಗಾರಿ ನಡೆಯುತ್ತಿರುವ ಬಗ್ಗೆ ಶಂಕೆಯಿದ್ದು, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹಾಗೂ ಗ್ರಾ. ಪಂ. ಪಿಡಿಒ ಇದರಲ್ಲಿ ಶಾಮೀಲಾಗಿರುವದು ಖಂಡನೀಯ ವೆಂದು ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು. ಅಭಿವೃದ್ಧಿ ಕಾರ್ಯದಲ್ಲಿ ಯಾವದೇ ರಾಜಕೀಯ ಬೆರೆಸುವದಿಲ್ಲ, ಆದರೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳ ಗಮನಕ್ಕೆ ತಾರದೆ ಕಾಮಗಾರಿ ನಡೆಸುತ್ತಿರುವದನ್ನು ಪ್ರಶ್ನಿಸಲೇಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಮಿತಿಯ ಸಹ ಕಾರ್ಯದರ್ಶಿ ಪೊನ್ನಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ 12 ಅಂಶಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸಿದ್ದು, ಇವುಗಳಲ್ಲಿ ನಿಯಮ ಉಲ್ಲಂಘಿಸಿ ಕಾಮಗಾರಿ ಕೈಗೆತ್ತಿಕೊಳ್ಳುವ ಅಂಶವೂ ಇದೆಯೇ ಎಂದು ಪ್ರಶ್ನಿಸಿದರು. ಬೆಳೆಯುತ್ತಿರುವ ಪಟ್ಟಣ ಗೋಣಿಕೊಪ್ಪ ಕಸ ವಿಲೇವಾರಿ ಸಮಸ್ಯೆಯನ್ನು ಎದುರಿಸುತ್ತಿದ್ದು, ಅಶುಚಿತ್ವದ ವಾತಾವರಣದಿಂದ ಜನ ಬೇಸತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಲಾಗದ ಅಧಿಕಾರಿಗಳು ತರಾತುರಿಯ ಕಾಮಗಾರಿಯನ್ನು ಕಳಪೆ ಗುಣಮಟ್ಟದಲ್ಲಿ ನಡೆಸುತ್ತಿದ್ದು, ದುರುಪಯೋಗದ ಉದ್ದೇಶ ಇದರಲ್ಲಿ ಅಡಗಿದೆ ಎಂದು ಪೊನ್ನಪ್ಪ ಆರೋಪಿಸಿದರು. ಕಾಮಗಾರಿ ಬಗ್ಗೆ ಸೂಕ್ತ ತನಿಖೆ ನಡೆಸದಿದ್ದಲ್ಲಿ ಪಕ್ಷದ ವತಿಯಿಂದ ಹೋರಾಟ ನಡೆಸಲು ಚಿಂತನೆ ನಡೆಸಲಾಗುವದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸ್ಥಾನೀಯ ಸಮಿತಿ ಅಧ್ಯಕ್ಷ ಗಾಂಧಿ ದೇವಯ್ಯ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಕಾರ್ಯದರ್ಶಿ ಜಪ್ಪು ಸುಬ್ಬಯ್ಯ ಹಾಗೂ ಸಹ ಕಾರ್ಯದರ್ಶಿ ರಾಧಾಕೃಷ್ಣ ಉಪಸ್ಥಿತರಿದ್ದರು.