ಸೋಮವಾರಪೇಟೆ, ಜೂ.26: ಜಿಲ್ಲೆಯಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವ ಗುರಿ ಈಡೇರಬೇಕಾದರೆ ಕೊಡಗನ್ನು ಮದ್ಯ ಹಾಗೂ ಮಾದಕ ದ್ರವ್ಯ ಮುಕ್ತವನ್ನಾಗಿ ಮಾಡುವ ಸಂಕಲ್ಪವನ್ನು ಎಲ್ಲರೂ ತೊಡಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮತ್ತು 945ನೇ ಮದ್ಯ ವರ್ಜನಾ ಶಿಬಿರದ ಶಿಬಿರಾಧಿಕಾರಿ ಗಣೇಶ್ ಆಚಾರ್ಯ ಕರೆ ನೀಡಿದರು.
ಇಲ್ಲಿನ ಕೊಡವ ಸಮಾಜದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಡೆಸುತ್ತಿರುವ ಮದ್ಯ ವರ್ಜನ ಶಿಬಿರದಲ್ಲಿ ಜಿಲ್ಲಾ ಜನ ಜಾಗೃತಿ ಸಮಿತಿ, ರೋಟರಿ ಮತ್ತು ಜೇಸೀ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ಯುವ ಜನಾಂಗ ಹೆಚ್ಚಾಗಿ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದೆ. ಮಹಿಳೆಯರು, ಯುವತಿಯರೂ ಸಹ ಈ ದುಶ್ಚಟಕ್ಕೆ ಶರಣಾಗಿರುವದು ದುರಂತ. ಪ್ರಪಂಚದಲ್ಲಿ ಕುಡಿಯಲು ನೀರಿಲ್ಲದೇ ಸತ್ತವರಿಗಿಂತ ಮದ್ಯ ಕುಡಿದು ಮಾದಕ ವ್ಯಸನಕ್ಕೆ ತುತ್ತಾಗಿ ಸತ್ತವರ ಸಂಖ್ಯೆಯೇ ಅಧಿಕ. ಮಾದಕ ದ್ರವ್ಯಗಳ ಸಾಗಾಟ, ಬಳಕೆ, ಮಾರಾಟಕ್ಕೆ ಸಂಬಂಧಿಸಿದಂತೆ ಸರ್ಕಾರದ ಕಾನೂನು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ ಎಂದು ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು. ಕೊಡಗಿನ ಮದುವೆಗಳಲ್ಲಿ ನೃತ್ಯ, ಸಂಭ್ರಮ ಎಷ್ಟೇ ಇರಲಿ;ದಯವಿಟ್ಟು ಓಪನ್ ಬಾರ್ ಮಾತ್ರ ಬೇಡ. ಮಾದಕ ವ್ಯಸನಗಳಿಗೆ ಒಮ್ಮೆ ದಾಸರಾದರೆ ಹಿಂತಿರುಗುವದು ಕಷ್ಟ. ಮಕ್ಕಳು ಮಹಿಳೆಯರಾದಿಯಾಗಿ ಎಲ್ಲರೂ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಓಪನ್ ಬಾರ್ ಅಳವಡಿಸುವ ಸಂಸ್ಕøತಿ ಇನ್ನಾದರೂ ಬದಲಾಗಲಿ ಎಂದು ಮನವಿ ಮಾಡಿದ ಗಣೇಶ್, ಕೊಡಗನ್ನು ಮಾದಕ ದ್ರವ್ಯ ಮುಕ್ತ ಮಾಡುವ ಸಂಕಲ್ಪ ಪ್ರತಿ ಮನೆಯಿಂದ ಪ್ರಾರಂಭವಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಭಾಸ್ಕರ್, ಆರೋಗ್ಯಯುತ ಜೀವನ ನಡೆಸಬೇಕಾದರೆ ಮೊದಲು ದುಶ್ಚಟಮುಕ್ತರಾಗಬೇಕು. ಸಪ್ತ ವ್ಯಸನಗಳಲ್ಲಿ ಮದ್ಯ ಸೇವನೆ ಮೊದಲ ಮೆಟ್ಟಿಲಾಗಿದ್ದು, ಇದು ಜಾರಿದರೆ ಉಳಿದೆಲ್ಲಾ ವ್ಯಸನಗಳು ತನ್ನಿಂತಾನೇ ಜಾರುತ್ತದೆ. ಎಲ್ಲಾ ರೀತಿಯ ವ್ಯಸನಗಳಿಂದ ಮುಕ್ತರಾದಾಗ ಮಾತ್ರ ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು. ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿ.ಪಂ. ಮಾಜೀ ಅಧ್ಯಕ್ಷ ವಿ.ಎಂ. ವಿಜಯ, ದುವ್ರ್ಯಸನಗಳಿಗೆ ಬಲಿಯಾದರೆ ಜೀವನ ನರಕ ವಾಗುತ್ತದೆ. ಆತನ ಕುಟುಂಬ ಬೀದಿಗೆ ಬರುತ್ತದೆ ಎಂದು ಎಚ್ಚರಿಸಿದರಲ್ಲದೆ, 945ನೇ ಮದ್ಯ ವರ್ಜನ ಶಿಬಿರದಲ್ಲಿ ಭಾಗವಹಿಸಿರುವ 45 ಶಿಬಿರಾರ್ಥಿ ಗಳೂ ಸಹ ಮದ್ಯ ತ್ಯಜಿಸಿ ಉತ್ತಮ ಜೀವನ ನಡೆಸಬೇಕು ಎಂದು ಶುಭಹಾರೈಸಿದರು. ಪ್ರಗತಿಪರ ಕೃಷಿಕ ರಾಮಣ್ಣ, ರೋಟರಿ ಸಂಸ್ಥೆಯ ಶುಭಾಕರ್, ಹಿಂದೂ ಜಾಗರಣಾ ವೇದಿಕೆಯ ಸುಭಾಶ್ ತಿಮ್ಮಯ್ಯ, ಜೇಸೀ ಸಂಸ್ಥೆ ಅಧ್ಯಕ್ಷ ಮಂಜುನಾಥ್, ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ, ಯೋಜನಾಧಿಕಾರಿ ವೈ. ಪ್ರಕಾಶ್ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರಾರ್ಥಿ ಶೇಷಾದ್ರಿ ಪ್ರಾರ್ಥಿಸಿ, ಸೇವಾ ಪ್ರತಿನಿಧಿ ಶೈಲಾ ಸ್ವಾಗತಿಸಿದರು. ರುಬೀನಾ ವಂದಿಸಿ, ಮೇಲ್ವಿಚಾರಕ ರಾಜೇಶ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಘ ಸಂಸ್ಥೆಗಳ ಪ್ರಮುಖರು, ಶಿಬಿರಾರ್ಥಿಗಳ ಕುಟುಂಬದವರು, ಯೋಜನೆಯ ಸದಸ್ಯರು ಉಪಸ್ಥಿತರಿದ್ದರು.