ಮಡಿಕೇರಿ, ಜೂ. 5: ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ನ 2ನೇ ವಾರ್ಷಿಕೋತ್ಸವ ಮಡಿಕೇರಿಯ ಕ್ರೆಸೆಂಟ್ ಶಾಲಾ ಸಭಾಂಗಣದಲ್ಲಿ ನಡೆಯಿತು. ಟ್ರಸ್ಟ್‍ನ ಅಧ್ಯಕ್ಷ ಬಿ.ಎ. ಷಂಶುದ್ದೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಚಿತ್ತಾರ ಚಾನೆಲ್ ನ ಸಂಪಾದಕಿ ಸವಿತಾ ರೈ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು 1200 ವರ್ಷಗಳ ಇತಿಹಾಸವಿರುವ ಬ್ಯಾರಿ ಭಾಷೆಗೂ ತುಳು ಭಾಷೆಗೂ ಅವಿನಾಭಾವ ಸಂಬಂಧವಿದೆ. ಕೊಡಗು ಬ್ಯಾರೀಸ್ ಟ್ರಸ್ಟ್ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿರುವದು ಪ್ರಶಂಸನೀಯವೆಂದು ಸವಿತಾ ರೈ ಅಭಿಪ್ರಾಯಪಟ್ಟರು.
ಪ್ರತಿಭಾ ಪುರಸ್ಕಾರವನ್ನು ವಿತರಿಸಿ ಮಾತನಾಡಿದ ಮಡಿಕೇರಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎ.ಮನ್ಸೂರ್ ಬ್ಯಾರಿ ಸಮುದಾಯ ದವರು ತಮ್ಮ ಮಕ್ಕಳಿಗೆ ಉನ್ನತ ವ್ಯಾಸಂಗವನ್ನು ಕೊಡಿಸುವ ಮೂಲಕ ಉನ್ನತ ಹುದ್ದೆಗಳನ್ನು ಹೊಂದಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ನಗರಸಭಾ ಸದಸ್ಯ ಎಂ.ಹೆಚ್. ಅಮೀನ್ ಮೊಹಿಸಿನ್ ಮಾತನಾಡಿ ವಿದ್ಯಾರ್ಥಿಗಳು ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದಿದರೆ ಅದು ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದರು. ಟ್ರಸ್ಟ್‍ನ ಅಧ್ಯಕ್ಷ ಬಿ.ಎ. ಷಂಶುದ್ದೀನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪಾಧ್ಯಕ್ಷರು ಗಳಾದ ಎಂ.ಬಿ. ನಾಸಿರ್ ಅಹ್ಮದ್, ಎಸ್.ಐ. ಮುನೀರ್ ಅಹ್ಮದ್, ಸದಸ್ಯ ಜಿ.ಹೆಚ್. ಮೊಹಮ್ಮದ್ ಹನೀಫ್ ಮುಂತಾದವರು ಸಮಾರಂಭದಲ್ಲಿ ಮಾತನಾಡಿದರು.
ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ 85ಕ್ಕಿಂತ ಅಧಿಕ ಅಂಕ ಪಡೆದ 31 ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಮಂಗಳೂರು ವಿವಿ ಬಿಕಾಂ ಪದವಿಯಲ್ಲಿ ಚಿನ್ನದ ಪದಕ ವಿಜೇತೆ ಮಡಿಕೇರಿ ಎಫ್.ಎಂ.ಸಿ ಕಾಲೇಜಿನ ವಿದ್ಯಾರ್ಥಿನಿ ಶರಾಫತ್ ಸನಾ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಗೆ ಆಯ್ಕೆಯಾದ ಮಡಿಕೇರಿಯ ಫಹಿಮಾ ರಹೀಮ್ ಇವರಿಗೆ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಅಬ್ದುಲ್ಲ ಮಡಿಕೇರಿ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಸ್. ರಫೀಕ್ ಅಹ್ಮದ್, ಶಾಹಿನ್ಸ್ ಫಯಾಝ್, ಉಪಸ್ಥಿತರಿದ್ದರು. ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಎಂ.ಇ. ಮಹಮ್ಮದ್ ವಂದಿಸಿದರು.