ಮಡಿಕೇರಿ, ಜೂ. 25: ವಿವಾದಿತ ಪ್ರದೇಶ ದೇವಟ್ ಪರಂಬುವಿನಲ್ಲಿ ಯಥಾಸ್ಥಿತಿ ಕಾಪಾಡಬೇಕು ಮತ್ತು ಸ್ಮಾರಕÀಕ್ಕೆಂದು ಅಳವಡಿಸಲಾಗಿರುವ ಸ್ತಂಭಗಳನ್ನು ಸರಕಾರ ವಶಪಡಿಸಿಕೊಳ್ಳಬೇಕೆಂದು ಕೊಡವ ಭಾಷಿಕರ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಕುಡಿಯರ ಮುತ್ತಪ್ಪ ಸಿಎನ್‍ಸಿ ಸಂಘಟನೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸಿಎನ್‍ಸಿ ಸಂಘಟನೆಯಲ್ಲಿರುವ ಬಲಾಢ್ಯರು ಇತರ ಸಮಾಜದವರನ್ನು ಕೀಳಾಗಿ ಕಾಣುತ್ತಿದ್ದಾರೆ. ಇತಿಹಾಸದ ಪ್ರಕಾರ ಟಿಪ್ಪುವಿನಿಂದ ಕೊಡವರು ಮಾತ್ರವಲ್ಲದೇ ಇಲ್ಲಿನ ಇತರ ಮೂಲ ನಿವಾಸಿಗಳು ಕೂಡ ಹತ್ಯೆ ಗೀಡಾಗಿದ್ದಾರೆ. ಇತಿಹಾಸದಲ್ಲಿ ದಾಖಲಾಗಿರುವಂತೆ 1785 ರಲ್ಲಿ ಟಿಪ್ಪುವಿನ ಮೂಲಕ ಸಾವಿರಾರು ಮಂದಿ ಹತ್ಯೆಯಾಗಿದ್ದು, ಮತಾಂತರ ಕೂಡ ಮಾಡಲಾಗಿದೆ. ಆದರೆ ಕೊಡವ ಜನಾಂಗವನ್ನು ಮಾತ್ರ ಹತ್ಯೆ ಮತ್ತು ಮತಾಂತರ ಮಾಡಲಾಗಿದೆ ಎನ್ನುವದನ್ನು ಒಪ್ಪಲು ಸಾಧ್ಯವಿಲ್ಲವೆಂದು ಕುಡಿಯರ ಮುತ್ತಪ್ಪ ತಿಳಿಸಿದರು.

ಸ್ವಾತಂತ್ರ್ಯ ಪೂರ್ವದ ವಿಚಾರವನ್ನು ಮುಂದಿಟ್ಟುಕೊಂಡು ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವದು ಸರಿಯಾದ ಕ್ರಮವಲ್ಲ. ದೇವಟ್ ಪರಂಬು ಎನ್ನುವ ಸ್ಥಳ ಇತಿಹಾಸದಲ್ಲಿದ್ದರೂ, ಯಾವದೇ ದಾಖಲೆಗಳಲ್ಲಿ ಕಂಡು ಬಂದಿಲ್ಲ. ಈ ವಿವಾದವನ್ನು ಕೈಬಿಟ್ಟು ಕೊಡಗಿನ ಜನ ನೆಮ್ಮದಿಯಿಂದ ಬಾಳಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು. ದೇವಟ್ ಪರಂಬು ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕರು ಹಾಗೂ ಸಂಸದರು ಕೊಡವ ಮತ್ತು ಗೌಡ ಸಮಾಜವನ್ನು ಮಾತ್ರ ಆಹ್ವಾನಿಸಿರುವ ಹಿಂದೆ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿರುವ ಎಲ್ಲಾ ಸಮುದಾಯಗಳ ಮುಖಂಡರುಗಳನ್ನು ಕರೆದು ಸಭೆ ನಡೆಸಬೇಕೆಂದ ಅವರು ಸಿಎನ್‍ಸಿ ಸಂಘಟನೆಗೆ ಮಾನವ ಸರಪಳಿ ಪ್ರತಿಭಟನೆಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.

ಜಿಲ್ಲೆಯ ಪ್ರತಿ ಸಂತೆಗಳಲ್ಲಿ ಮಾನವ ಸರಪಳಿ ನಿರ್ಮಿಸುವದರಿಂದ ಸಾರ್ವಜನಿಕರಿಗೆ ಅಡಚಣೆಯಾಗುತ್ತಿದೆ ಎಂದು ಮುತ್ತಪ್ಪ ಆರೋಪಿಸಿದರು.

ಜಿಲ್ಲೆಯ ಅನೇಕ ಸಮಸ್ಯೆಗಳಿಗೆ ಹೋರಾಟದ ಮೂಲಕ ಸ್ಪಂದಿಸಿರುವ ಕೊಡಗು ಸೌಹಾರ್ದ ವೇದಿಕೆಯ ಗೌರವಾಧ್ಯಕ್ಷ ಎ.ಕೆ. ಸುಬ್ಬಯ್ಯ ಅವರ ವಿರುದ್ಧ ಕೆಲವು ಸಂಘಟನೆಗಳು ಮಾಡುತ್ತಿರುವ ಟೀಕೆಗಳು ಖಂಡನೀಯವೆಂದು ಅವರು ತಿಳಿಸಿದರು.

ಜಿಲ್ಲೆಯ ಊರ್‍ಮಂದ್‍ಗಳು ನಾಡ್ ಮಂದ್‍ಗಳಾಗಿ ಪರಿವರ್ತನೆಗೊಂಡಿವೆ. ಇದೀಗ ಕೊಡವ ಮಂದ್‍ಗಳಾಗಿ ಬದಲಾವಣೆಯಾಗಿದ್ದು, ಇದು ಸರಿಯಾದ ಕ್ರಮವಲ್ಲವೆಂದು ಅವರು ಹೇಳಿದರು.

ಕೊಡವ ಮಡಿವಾಳ ಸಂಘದ ಪ್ರಮುಖರಾದ ರಘು ಪೂಣಚ್ಚ ಮಾತನಾಡಿ, ಜಿಲ್ಲೆಯಲ್ಲಿ 18 ಕೊಡವ ಭಾಷಿಕ ಸಮೂಹವಿದ್ದು, ಇವರೆಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ದೇವಟ್ ಪರಂಬು ವಿವಾದವನ್ನು ಬಗೆಹರಿಸಬೇಕೆಂದು ಒತ್ತಾಯಿಸಿದರು. ಕೊಡವ ಭಾಷಿಕ 18 ಸಮಾಜವನ್ನು ಮರೆತರೆ ಸ್ಮಾರಕ ನಿರ್ಮಾಣಕ್ಕೆ ಬೆಂಬಲ ನೀಡುವದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ಕುಡಿಯರ ದಿಲೀಪ್ ಕುಮಾರ್, ಅರಮನೆ ಪಾಲೆರ ರಾಣಿ ಅಪ್ಪಣ್ಣ ಹಾಗೂ ಸೋಮಯ್ಯ ಉಪಸ್ಥಿತರಿದ್ದರು.