*ಗೋಣಿಕೊಪ್ಪಲು, ಮೇ 16: ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ಪಟ್ಟಣ ಗೋಣಿಕೊಪ್ಪಲಿನಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ತೀವ್ರಗೊಂಡಿದೆ. ಇಲ್ಲಿಯ 2 ರಿಂದ 3 ಟ್ರ್ಯಾಕ್ಟರ್‍ನಷ್ಟು ಕಸ ಸಂಗ್ರಹವಾಗುತ್ತದೆ.

ಈ ಕಸ ವಿಲೇವಾರಿಗೆ ಎದುರಾದ ಜಾಗದ ಸಮಸ್ಯೆಯಿಂದ ಗ್ರಾಮ ಪಂಚಾಯಿತಿ ಇಡೀ ಪಟ್ಟಣದ ಕಸವನ್ನು ಪೌರ ಕಾರ್ಮಿಕರು ಕಸ ಗುಡಿಸಿ ಚೀಲದಲ್ಲಿ ತುಂಬಿಸುತ್ತಾರೆ. ಬಳಿಕ ಅದನ್ನು ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿಯೇ ಹಾಕುತ್ತಿದ್ದಾರೆ. ಕಳೆದ ಒಂದು ವಾರದಿಂದ ತುಂಬಿರುವ ಕಸ ಕೊಳೆತು ಗಬ್ಬೆದ್ದು ನಾರುತ್ತಿದೆ. ಕಸದ ತುಂಬ ನೊಣ ಸೊಳ್ಳೆಗಳು ತುಂಬಿ ಕಾಲರ, ಮಲೇರಿಯಾ ಮುಂತಾದ ಸಾಂಕ್ರಮಿಕ ರೋಗ ಹರುಡುವ ಭೀತಿ ಎದುರಾಗಿದೆ. ಮುಖ್ಯರಸ್ತೆಯ ಸಮುದಾಯ ಆರೋಗ್ಯ ಕೇಂದ್ರದ ಎದುರು ಹಾಕಿರುವ ಕಸದ ರಾಶಿ ದುರ್ವಾಸನೆ ಬೀರುತ್ತಿದ್ದು ಆಸ್ಪತ್ರೆಗೆ ತೆರಳುವ ಜನತೆ ಮೂಗು ಮುಚ್ಚಿಕೊಂಡು ನಡೆದಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಬಸ್ ನಿಲ್ದಾಣ ಹಾಗೂ ಇತರ ಕಡೆಗಳಲ್ಲಿಯೂ ಇದೆ. ಮುಖ್ಯ ರಸ್ತೆಯ ಸ್ಥಿತಿಯೇ ಹೀಗಿರುವಾಗ ಒಳ ಭಾಗದ ಬಡಾವಣೆಗಳ ಸ್ಥಿತಿ ಕೇಳುವದೇ ಬೇಡ.

ಹಿಂದೆ ಗೋಣಿಕೊಪ್ಪಲಿನ ಕಸವನ್ನು ಖಾಸಗಿ ಜಾಗದಲ್ಲಿ ಹಾಕಲಾಗುತ್ತಿತ್ತು. ಜೊತೆಗೆ ಕೀರೆ ಹೊಳೆ ದಡದಲ್ಲಿಯೂ ತುಂಬಿಸಲಾಗುತ್ತಿತ್ತು. ಈಗ ಆ ಜಾಗವೆಲ್ಲ ಭರ್ತಿಯಾಗಿದೆ. ಎಲ್ಲಿಯೂ ಜಾಗವಿಲ್ಲದಂತಾಗಿದೆ. ಗ್ರಾಮ ಪಂಚಾಯಿತಿ ಅಸ್ತಿತ್ವಕ್ಕೆ ಬಂದ ಹೊಸದÀರಲ್ಲಿಯೇ ದೂರ ದೃಷ್ಟಿ ಇಟ್ಟುಕೊಂಡು ಸರ್ಕಾರಿ ಜಾಗವನ್ನು ಕಸ ಹಾಕುವದಕ್ಕೆ ಮೀಸಲಿರಬೇಕಿತ್ತು. ಗೋಣಿಕೊಪ್ಪಲು ಸುತ್ತಮುತ್ತ ಬಹಳಷ್ಟು ಪ್ರಮಾಣದಲ್ಲಿ ಸರ್ಕಾರಿ ಜಾಗವಿದ್ದರೂ ಅದೆಲ್ಲ ಒತ್ತುವರಿಯಾಗಿದೆ. ಗ್ರಾಮ ಪಂಚಾಯಿತಿ ಈಗಲಾದರೂ ದೃಢ ಮನಸ್ಸು ಮಾಡಿ ಒತ್ತುವರಿ ಜಾಗವನ್ನು ತೆರವುಗೊಳಿಸಿ ತನ್ನ ವಶಕ್ಕ ಪಡೆದುಕೊಳ್ಳಬಹುದು. ಆದರೆ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳಿಗೆ ಆ ಇಚ್ಚಾಶಕ್ತಿ ಇಲ್ಲದಂತೆ ತೋರುತ್ತಿದೆ.

ಗೋಣಿಕೊಪ್ಪಲು ಪ್ರಮುಖ ವಾಣಿಜ್ಯ ನಗರ ವಾಗಿದ್ದರೂ ಇನ್ನೂ ಗ್ರಾಮ ಪಂಚಾಯಿತಿ ಆಗಿಯೇ ಉಳಿದಿದೆ.ಇದೀಗ ಪಂಚಾಯಿತಿಯಲ್ಲಿ ಜನ ಪ್ರತಿನಿಧಿಗಳ ಆಡಳಿತವಿಲ್ಲ.ಪಿಡಿಒ ಆಡಳಿತ ನಡೆಸುತ್ತಿದ್ದಾರೆ. ಪಂಚಾಯಿತಿಗೆ ಇದೀಗ ಚುನಾವಣೆ ನಡೆದಿದ್ದು ಇನ್ನಷ್ಟೇ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಯಾಗಬೇಕಿದೆ. ಮುಂದೆ ಬಂದವರು ಕಸವಿಲೇವಾರಿ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಪಿಡಿಒ ರಾಜೇಶ್ ಕಸ ಹಾಕುವದಕ್ಕೆ ಜಾಗದ ಸಮಸ್ಯೆ ಕಾಡುತ್ತಿದೆ. ಖಾಸಗಿ ಯವರು ಜಾಗ ನೀಡಲು ಮುಂದೆ ಬಂದರೆ ಅನುಕೂಲವಾಗಲಿದೆ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ ಮಾತನಾಡಿ, ಕಳೆದ 8ತಿಂಗಳಿನಿಂದ ತಮ್ಮ ಜಾಗದಲ್ಲಿ ಕಸ ತುಂಬಿಸಲಾಗುತ್ತಿತ್ತು. ಇದೀಗ ಅದು ಭರ್ತಿಯಾಗಿದೆ. ಕಸ ಹಾಕುವದಕ್ಕೆ ಜಾಗ ಗುರುತು ಮಾಡಲಾಗಿದೆ. ಒಂದು ತಿಂಗಳಿನಲ್ಲಿ ಸಮಸ್ಯೆ ಪರಿಹಾರವಾಗಲಿದೆ. ಅಲ್ಲಿಯವರೆಗೆ ಪಟ್ಟಣದ ಜನತೆ ರಸ್ತೆಯಲ್ಲಿ ಕಸ ಹಾಕದೆ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಚಿತ್ರ ವರದಿ : ಎನ್.ಎನ್.ದಿನೇಶ್