ಸಿದ್ದಾಪುರ, ಜೂ. 26: ಗಡಿ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಕನ್ನಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವದರ ಮೂಲಕ ಕನ್ನಡ ಭಾಷೆ, ಸಂಸ್ಕøತಿಯನ್ನು ಬೆಳೆಸಬೇಕೆಂದು ಕೊಡಗು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಲೋಕೇಶ್ ಸಾಗರ್ ಕರೆ ನೀಡಿದರು.

ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತು ಅಮ್ಮತ್ತಿ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಗಡಿ ಭಾಗದಲ್ಲಿ ಇತರ ಭಾಷಿಗರು ಹೆಚ್ಚಾಗಿದ್ದು, ಕನ್ನಡದ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುವದ ರೊಂದಿಗೆ ಕನ್ನಡವನ್ನು ಬೆಳೆಸುವ ಕಾರ್ಯ ನಡೆಯಬೇಕು ಎಂದರು.

ಕ.ಸಾ.ಪ. ತಾಲೂಕು ಅಧ್ಯಕ್ಷ ಮಧೋಷ್ ಪೂವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಗಳಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮ ಹಮ್ಮಿಕೊಳ್ಳುವದರ ಮೂಲಕ ಕನ್ನಡದ ಮಹತ್ವವನ್ನು ತಿಳಿಸಿಕೊಡಬೇಕು. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಹಲವು ಯೋಜನೆ ಗಳನ್ನು ರೂಪಿಸಿದೆ ಎಂದರು.

ಕ.ಸಾ.ಪ. ಅಮ್ಮತ್ತಿ ಹೋಬಳಿ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಎಸ್. ವೆಂಕಟೇಶ್ ಮಾತನಾಡಿ, ಕಳೆದ ಅವಧಿಯಲ್ಲಿ ಅಮ್ಮತ್ತಿ ಹೋಬಳಿ ಮಟ್ಟದಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದು, ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳು ವದರ ಮೂಲಕ ಕನ್ನಡ ಭಾಷೆ ಹಾಗೂ ಸಂಸ್ಕøತಿಯನ್ನು ಬೆಳೆಸಲು ಪ್ರಯತ್ನಿಸುವದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಒಂದನೇ ತರಗತಿಯಿಂದ 8 ನೇ ತರಗತಿಯವರೆಗೆ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಪಡೆದವರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರನ್ನು ಹೋಬಳಿ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕ.ಸಾ.ಪ. ಜಿಲ್ಲಾ ಸಮಿತಿ ಸದಸ್ಯ ರೆಜಿತ್ ಕುಮಾರ್, ವಿ.ಎಸ್. ಸಜಿ, ಕಾರ್ಯದರ್ಶಿ ಮಂಜುನಾಥ್, ಶಾಲಾ ಮುಖ್ಯೋಪಾಧ್ಯಾಯಿನಿ ಪ್ರೇಮ ಕುಮಾರಿ ಇದ್ದರು. ಕಾರ್ಯಕ್ರಮದಲ್ಲಿ ತಾಲೂಕು ಸಮಿತಿ ಸದಸ್ಯ ದರ್ಶನ್, ಹೋಬಳಿ ಸಮಿತಿ ಸದಸ್ಯರಾದ ಸುಬ್ರಮಣಿ, ಹಂಸ, ಸಧನ್, ಶುಕೂರ್, ವೈಜು ಸೇರಿದಂತೆ ಇತರರು ಇದ್ದರು.