ಮಡಿಕೇರಿ, ಜೂ. 18: ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ ಅವರು ಮಡಿಕೇರಿ ತಾಲೂಕಿನ ಕಾಂತೂರು ಮೂರ್ನಾಡು, ಮರಗೋಡು, ಹೊಸ್ಕೇರಿ ಹಾಗೂ ಮಕ್ಕಂದೂರು ಗ್ರಾ.ಪಂ.ಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಪರಿಶೀಲಿಸಿ, ಗ್ರಾ.ಪಂ. ಸದಸ್ಯ ರೊಂದಿಗೆ ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚಿಸಿದರು.
ಕಾಂತೂರು ಮೂರ್ನಾಡು ಗ್ರಾ.ಪಂ.ಗೆ ತೆರಳಿ ಸ್ಥಳೀಯರು ಹಾಗೂ ಗ್ರಾ.ಪಂ. ಸದಸ್ಯರ ಅಹವಾಲನ್ನು ಸ್ವೀಕರಿಸಿದರು. ಗ್ರಾ.ಪಂ.ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭಿವೃದ್ಧಿ ಅಧಿಕಾರಿ ಯಾವದೇ ಮಾಹಿತಿ ನೀಡದೆ ರಜೆಯ ಮೇಲೆ ತೆರಳಿದ್ದು, ವಾರದಲ್ಲಿ 2-3 ದಿನ ಮಾತ್ರ ಕರ್ತವ್ಯಕ್ಕೆ ಬರುತ್ತಾರೆ. ಇವರಿಂದ ಯಾವದೆ ಪ್ರಯೋಜನ ಇಲ್ಲ. ಇವರನ್ನು ಬೇರೆಡೆಗೆ ವರ್ಗಾಯಿಸಲು ಸ್ಥಳೀಯರು ಹಾಗೂ ಗ್ರಾ.ಪಂ.ಯ ಸದಸ್ಯರು ಒತ್ತಾಯಿಸಿದರು.
ಲೆಕ್ಕ ಪತ್ರ ಸಹಾಯಕರು ಬಿಟ್ಟು ಬೇರೆ ಎಲ್ಲಾ ಹುದ್ದೆಗಳು ಖಾಲಿಯಿದೆ. ಹಕ್ಕು ಪತ್ರದ ಸಮಸ್ಯೆ, ಅಕ್ರಮ ಕಟ್ಟಡಗಳು, ನೀರಿನ ಸಮಸ್ಯೆ, ದೇವರ ಕಾಡಿನಲ್ಲಿ ವಾಸಿಸುತ್ತಿರುವ ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಸುನೀಲ್ ಸುಬ್ರಮಣಿ ಅವರು ಶಾಸಕರೊಂದಿಗೆ ಸಮಸ್ಯೆ ಗಳನ್ನು ಚರ್ಚಿಸಿ ಪರಿಹರಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭ ಗ್ರಾ.ಪಂ.ಯ ಅಧ್ಯಕ್ಷೆ ಕಲ್ಲುಮುಟ್ಲು ಜಮುನ, ಉಪಾಧ್ಯಕ್ಷ ಪವಿತ್ರ ಕುಟ್ಟಪ್ಪ, ತಾ.ಪಂ. ಉಪಾಧ್ಯಕ್ಷ ಸಂತು ಸುಬ್ರಮಣಿ, ಜನತಾ ಬಜಾರ್‍ನ ಅಧ್ಯಕ್ಷ ರವಿ ಬಸಪ್ಪ, ಜಿ.ಪಂ. ಸದಸ್ಯೆ ಕಲಾವತಿ ಪೂವಪ್ಪ, ತಾ.ಪಂ. ಸದಸ್ಯೆ ಶಶಿ, ಮಾಜಿ ಗ್ರಾ.ಪಂ. ಅಧ್ಯಕ್ಷÀರಾದ ಪೂವಪ್ಪ, ಪಳಂಗಂಡ ಅಪ್ಪಣ್ಣ, ಗ್ರಾ.ಪಂ.ಯ ಲೆಕ್ಕ ಸಹಾಯಕ ಪ್ರಸಾದ್ ಮತ್ತಿತರರು ಹಾಜರಿದ್ದರು.
ಮರಗೋಡು ಗ್ರಾ.ಪಂ.ಗೆ ಭೇಟಿ ನೀಡಿ ನಿವೇಶನ ರಹಿತರಿಗೆ ಜಾಗ ಮಂಜೂರಾತಿ, ನವ ಗ್ರಾಮದ ನಿರ್ಮಾಣ, ಕಂದಾಯ ಇಲಾಖಾ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷತೆ, ಸ್ಮಶಾನ ಜಾಗಗಳ ಒತ್ತುವರಿ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಹಾಗೂ ಗ್ರಾ.ಪಂ. ಸದಸ್ಯರ ಅಹವಾಲುಗಳನ್ನು ಸ್ವೀಕರಿಸಿದರು. ಗ್ರಾ.ಪಂ. ಅಧ್ಯಕ್ಷ ಬಿದ್ರುಪಣೆ ಮೋಹನ್ ಹಾಗೂ ಸದಸ್ಯರು, ಪಿ.ಡಿ.ಓ. ಆಶಾ ಕುಮಾರಿ ಮತ್ತಿತರರು ಹಾಜರಿದ್ದರು.
ಹೊಸ್ಕೇರಿ ಗ್ರಾ.ಪಂ.ಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿಗೆ ಕಟ್ಟಡ, ರಸ್ತೆ ದುರಸ್ತಿ, ವಿದ್ಯುತ್ ಸಮಸ್ಯೆ, ಮುಂತಾದ ಸಾರ್ವಜನಿಕರ ಹಾಗೂ ಗ್ರಾ.ಪಂ. ಸದಸ್ಯರ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭ ಗ್ರಾ.ಪಂ.ಯ ಅಧ್ಯಕ್ಷೆ ಮಮತ ಪಿ.ಎನ್, ಅಭಿಯಂತರ ಯೂಸುಫ್ ಆಲಿ, ಸ್ಥಳಿಯ ರಘು ಆನಂದ್, ಗ್ರಾ.ಪಂ ಸದಸ್ಯರು ಹಾಗೂ ಪಿ.ಡಿ.ಓ. ಹಾಜರಿದ್ದರು.
ಅಪರಾಹ್ನ ಮಕ್ಕಂದೂರು ಗ್ರಾ.ಪಂ.ಗೆ ಭೇಟಿ ನೀಡಿ ರಸ್ತೆಗಳ ಅಭಿವೃದ್ಧಿ, ಹಕ್ಕು ಪತ್ರ ಮಂಜೂರಾತಿ ಬಗ್ಗೆ ಸಾರ್ವಜನಿಕರು ಹಾಗೂ ಗ್ರಾ.ಪಂ. ಸದಸ್ಯರ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭ ಗ್ರಾ.ಪಂ.ಯ ಅಧ್ಯಕ್ಷೆ ಕಾವೇರಮ್ಮ, ಜಿ.ಪಂ. ಸದಸ್ಯೆ ಪದ್ಮಾವತಿ, ಪ್ರಮುಖರಾದ ರಾಬಿನ್ ದೇವಯ್ಯ, ರಮೇಶ್, ರವಿ ಕಾಳಪ್ಪ, ತಾ.ಪಂ. ಸದಸ್ಯ ರಾಯ್ ತಮ್ಮಯ್ಯ, ಅಭಿಯಂತರರು, ಗ್ರಾ.ಪಂ. ಸದಸ್ಯರು, ಪಿ.ಡಿ.ಓ. ಚಂಗಪ್ಪ, ಮತ್ತಿತರರು ಹಾಜರಿದ್ದರು.