ಮಡಿಕೇರಿ, ಜೂ. 25: ಬಿ.ಜೆ.ಪಿ. ಸರಕಾರದ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದ ಸಂದರ್ಭ ಕೊಡಗಿನ ಗ್ರಾಮೀಣ ಭಾಗಗಳಲ್ಲಿ ವಿಶೇಷವಾಗಿ ವಿಧಾನ ಸಭಾಧ್ಯಕ್ಷರಾಗಿದ್ದ ಕೆ.ಜಿ. ಬೋಪಯ್ಯ ಪ್ರಯತ್ನದ ಫಲವಾಗಿ ವಿದ್ಯುತ್ ಸಂಪರ್ಕವನ್ನು ಜಿಲ್ಲೆಯ ಅನೇಕ ಹಳ್ಳಿಗಳಿಗೆ ಕಲ್ಪಿಸಲಾಗಿತ್ತು.

ಈ ಸಂದರ್ಭ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಟ್ಲು, ಹಮ್ಮಿಯಾಲ, ಹಚ್ಚಿನಾಡು ಸೇರಿದಂತೆ ಹಲವು ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರೂ ಅದೇ ವರ್ಷ ಮಳೆಗಾಲದಲ್ಲಿ ಅಲ್ಲಲ್ಲಿ ಮರಗಳು ಬಿದ್ದು ನೂರಾರು ವಿದ್ಯುತ್ ಕಂಬಗಳು ತುಂಡಾಗಿ ಅಪಾರ ನಷ್ಟ ಸಂಭವಿಸಿತ್ತು.

ಮುಟ್ಲು ಗ್ರಾಮದಲ್ಲಿ ಚಿಲ್ಲಜಮ್ಮಂಡ ಕುಟುಂಬಸ್ಥರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಸಂಬಂಧಿಸಿದ ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಎದುರಾಗಿದೆ.

ಈ ವ್ಯಾಪ್ತಿಯಲ್ಲಿ ನಿಯಮಾನು ಸಾರ ಕಂಬಗಳನ್ನು ಅಳವಡಿಸದೇ ಭಾರೀ ಅಂತರದಲ್ಲಿ ಬೇಜವಾಬ್ದಾರಿ ತನದಿಂದ ಚೆಸ್ಕಾಂ ಸಿಬ್ಬಂದಿಗಳು, ಗುತ್ತಿಗೆದಾರರು ವಿದ್ಯುತ್ ಕಂಬ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಇದರಿಂದಾಗಿ ಈ ಬಾರಿಯ ಭಾರೀ ಗಾಳಿ-ಮಳೆಯಿಂದಾಗಿ ಈ ವ್ಯಾಪ್ತಿಯಲ್ಲಿ ಸಂಚರಿಸುವವರ ಜೀವಕ್ಕೆ ಸಂಚಕಾರ ಬಂದೊದಗುವ ಆತಂಕ ಎದುರಾಗಿದೆ.

ಚಿಲ್ಲಜಮ್ಮಂಡ ಕುಟುಂಬದವರ ರೈತ ಯೋಗಾತ್ಮ ಎಂಬವರ ಗದ್ದೆ ಮಧ್ಯೆ ಹಾದು ಹೋಗಿರುವ ವಿದ್ಯುತ್ ತಂತಿಯ ಮಾರ್ಗ ಕಂಬದಿಂದ ಬೇರ್ಪಟ್ಟು, ಪ್ರಸಕ್ತ ಪರಸ್ಪರ ಸ್ಪರ್ಷದೊಂದಿಗೆ ಯಾವದೇ ಸಂದರ್ಭ ತುಂಡಾಗಿ ಆ ತಂತಿಗಳು ಗದ್ದೆಯಲ್ಲಿ ಬಿದ್ದು ಇಲ್ಲಿ ಸಂಚರಿಸುವವರ ಜೀವಕ್ಕೆ ಎರವಾಗುವ ಅಪಾಯ ಹೆಚ್ಚಾಗಿದೆ.

ಈ ಬಗ್ಗೆ ಸ್ಥಳೀಯ ನಿವಾಸಿಗಳು 20 ದಿನಗಳ ಹಿಂದೆ ಸಂಬಂಧಿಸಿದ ಚೆಸ್ಕಾಂ ಅಧಿಕಾರಿಗಳ ಗಮನ ಸೆಳೆದಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸಿದ್ದಾರೆ.

ಈ ಪರಿಸ್ಥಿತಿಯಿಂದಾಗಿ ರಾತ್ರಿ ವೇಳೆ ವಿದ್ಯುತ್ ಸಂಪರ್ಕವೂ ಇಲ್ಲದೇ ಸುತ್ತಮುತ್ತಲಿನ ನಿವಾಸಿಗಳು 20 ದಿನಗಳಿಂದ ಕತ್ತಲಲ್ಲಿಯೇ ಕಳೆಯುವಂತಾಗಿದೆ. ಜೊತೆಗೆ ಮೊಬೈಲ್ ಮತ್ತಿತರ ವಿದ್ಯುತ್ ಉಪಕರಣಗಳಿದ್ದರೂ ಉಪಯೋಗಿಸ ಲಾಗದೇ ಸಮಸ್ಯೆ ಎದುರಿಸುತ್ತಿದ್ದಾರೆ. ಅಪಾಯ ಸಂಬಂಧಿತ ಮಾಹಿತಿಯನ್ನೂ ನೀಡಲಾಗದ ಸ್ಥಿತಿಯಲ್ಲಿ ಈ ಗ್ರಾಮಸ್ಥರಿದ್ದಾರೆ.

ಚೆಸ್ಕಾಂ ಅಧಿಕಾರಿಗಳು ಇನ್ನಾದರೂ ಗ್ರಾಮೀಣ ಪ್ರದೇಶದ ಜನತೆಯ ಸಮಸ್ಯೆಗೆ ಸೂಕ್ತ ರೀತಿಯಲ್ಲಿ ತಕ್ಷಣವೇ ಸ್ಪಂದಿಸುವಂತೆ ಮುಟ್ಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- ಶ್ರೀಸುತ