ಕುಶಾಲನಗರ, ಜೂ. 18: ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯದ ವಾರ್ಷಿಕ ಪೂಜಾ ಕಾರ್ಯಕ್ರಮ ಶನಿವಾರ ನಡೆಯಿತು.

ದೇವಾಂಗ ಸಂಘದ ಆಶ್ರಯದಲ್ಲಿ ದೇವಾಲಯದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಧ್ವಜಾರೋಹಣ ನೆರವೇರಿದವು. ನಂತರ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯ ಕಾವೇರಿ ನದಿಯಲ್ಲಿ ಗಂಗೆಪೂಜೆ ನೆರವೇರಿಸಿ ಮಂಗಳವಾದ್ಯದೊಂದಿಗೆ ಪೂರ್ಣ ಕುಂಭ ಕಲಶ ಹೊತ್ತ ಮಹಿಳೆಯರು ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಮೈಸೂರು ಮಹೇಶ್ ಹಾಗೂ ತಂಡದವರು ಪ್ರದರ್ಶಿಸಿದ ವೀರಗಾಸೆ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಮೆರವಣಿಗೆಯು ಪಟ್ಟಣದ ಗಣಪತಿ ದೇವಸ್ಥಾನದಿಂದ ರಥಬೀದಿಯ ಮೂಲಕ ಚೌಡೇಶ್ವರಿ ದೇವಸ್ಥಾನಕ್ಕೆ ತೆರಳಿತು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಭಕ್ತಾದಿಗಳಿಗೆ ದೇವಸ್ಥಾನ ಸಮಿತಿ ವತಿಯಿಂದ ಪ್ರಸಾದ ವಿತರಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣದ ಜನರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ಉತ್ಸವದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಡಿ.ಕೆ. ತಿಮ್ಮಪ್ಪ, ದೇವಾಲಯ ಸಮಿತಿ ಅಧ್ಯಕ್ಷ ಡಿ.ಟಿ. ವಿಜೇಂದ್ರ, ಉಪಾಧ್ಯಕ್ಷರಾದ ಡಿ.ಆರ್. ಸೋಮಶೇಖರ್, ಡಿ.ಕೆ. ಮಹೇಶ್, ಪ್ರಧಾನ ಕಾರ್ಯದರ್ಶಿ ಡಿ.ವಿ. ರಾಜೇಶ್ ಹಾಗೂ ಸಮಿತಿ ಸದಸ್ಯರು ಇದ್ದರು. ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ದೀಪಾಲಂಕೃತ ಮಂಟಪದಲ್ಲಿ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.