ಮಡಿಕೇರಿ, ಜೂ. 30: ಕೋಟೆ ಹಳೇ ವಿಧಾನ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎ. ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿ ವರ್ಗದ ಕಾರ್ಯವೈಖರಿ ಬಗ್ಗೆ ಆಡಳಿತ ಹಾಗೂ ವಿಪಕ್ಷ ಸದಸ್ಯರುಗಳಿಂದ ತೀವ್ರ ಅಸಮಾಧಾನ ವ್ಯಕ್ತಗೊಂಡಿತು.

ಸಮರ್ಪಕ ಮಾಹಿತಿಯಿಲ್ಲದೆ ಸಭೆಯಲ್ಲಿ ಹಾಜರಾಗಿದ್ದ ಕೆಲ ಅಧಿಕಾರಿಗಳು ಜಿ.ಪಂ. ಸದಸ್ಯರುಗಳಿಂದ ಟೀಕೆಗೊಳಗಾಗ ಬೇಕಾಯಿತು. ಅದರಲ್ಲೂ ಪ್ರಮುಖವಾಗಿ ಆರೋಗ್ಯ ಇಲಾಖೆ, ಆಹಾರ ಇಲಾಖೆ, ಭೂಸೇನಾ ನಿಗಮ, ತೋಟಗಾರಿಕಾ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಸ್ಪಷ್ಟ ಮಾಹಿತಿ ಒದಗಿಸುವಲ್ಲಿ ವಿಫಲರಾಗಿ ನಿಂದನೆಗೊಳಗಾಗಬೇಕಾಯಿತು.

ಸಭೆಯ ಆರಂಭದಲ್ಲಿ ಮಾತನಾಡಿದ ಜಿ.ಪಂ. ಸದಸ್ಯರಾದ ಸಿ.ಕೆ. ಬೋಪಣ್ಣ ಹಾಗೂ ಶಶಿ ಸುಬ್ರಮಣಿ ಇವರುಗಳು ಭೂ ಸೇನಾ ನಿಗಮ ನಿರ್ವಹಿಸುತ್ತಿರುವ ಕಾಮಗಾರಿಗಳು ಪೂರ್ಣಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಭೂಸೇನಾ ನಿಗಮ ನಿರ್ವಹಿಸುತ್ತಿರುವ ಬಹುತೇಕ ಕಾಮಗಾರಿಗಳು ಅಪೂರ್ಣವಾಗಿದ್ದು, ಜಿ.ಪಂ.ನಿಂದ ಯಾವದೇ ಕಾಮಗಾರಿಯನ್ನು ಭೂಸೇನಾ ನಿಗಮಕ್ಕೆ ವಹಿಸದಂತೆ ಒತ್ತಾಯಿಸಿದರು. ಸದಸ್ಯ ಅಚ್ಚಪಂಡ ಮಹೇಶ್ ಮಾತನಾಡಿ, ತೋಟಗಾರಿಕಾ ಇಲಾಖೆಯಿಂದ ರೈತರಿಗೆ ಸರಿಯಾಗಿ ಸಸಿ ವಿತರಣೆಯಾಗುತ್ತಿಲ್ಲ. ಆದ್ದರಿಂದ ರೈತರಿಗೆ ನೇರವಾಗಿ ಸಸಿಗಳನ್ನು ವಿತರಿಸುವಂತಾಗಬೇಕು. ಇಲಾಖೆ ಮೂಲಕ ಬೇಡ ಎಂದರು. ಸದಸ್ಯ ಮುರಳಿ ಅವರು ಇದಕ್ಕೆ ದನಿಗೂಡಿಸಿದರು.

ಸದಸ್ಯೆ ಸರಿತಾ ಪೂಣಚ್ಚ ಮಾತನಾಡಿ ಸಿದ್ದಾಪುರ ಆಸ್ಪತ್ರೆಗೆ ರೂ. 6 ಲಕ್ಷ ಅನುದಾನ ಮೀಸಲಿಟ್ಟಿರುವದಾಗಿ ಇತ್ತೀಚೆಗೆ ಪೊನ್ನಂಪೇಟೆಯಲ್ಲಿ ನಡೆದ ಸಭೆಯಲ್ಲಿ ಆರೋಗ್ಯಾಧಿಕಾರಿ ಹೇಳಿದ್ದರೂ, ಇಂದಿನ ಸಭೆಯಲ್ಲಿ ರೂ. 3 ಲಕ್ಷ ಮೀಸಲಿಟ್ಟಿರುವದಾಗಿ ಮಾಹಿತಿ ನೀಡಿದ್ದಾರೆ. ಇದೆಷ್ಟು ಸರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯಾಧಿಕಾರಿ ಶ್ರೀರಂಗಪ್ಪ ಅವರು ಅಂದಿನ ಸಭೆಯಲ್ಲೂ 3 ಲಕ್ಷವನ್ನೇ ಮೀಸಲಿಟ್ಟಿದ್ದುದು ಎಂದು ಸ್ಪಷ್ಟಪಡಿಸಿದಾಗ ‘ಹಾಗಾದ್ರೆ ನಾನ್ ತಲೆಕೆಟ್ಟು ಸಭೆಗೆ ಬಂದಿದ್ದೆ ಅನ್ಕೊಂಡ್ರಾ ನೀವು?' ಎಂದು ಪ್ರಶ್ನಿಸಿ ಸುಮ್ಮನಾದರು.

ಶ್ರೀಮಂತರಿಗೂ ಬಿಪಿಎಲ್ ಕಾರ್ಡ್!

ಬಿಪಿಎಲ್ ಕಾರ್ಡ್ ಬಡವರಿಗೆ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಶ್ರೀಮಂತರಿಗೆ ಸುಲಭವಾಗಿ ಸಿಗುತ್ತಿದೆ ಎಂದು ಸದಸ್ಯೆ ಸರೋಜಮ್ಮ ಆಕ್ಷೇಪಿಸಿದರು. ಸದಸ್ಯ ಬೋಪಣ್ಣ ಬಿಪಿಎಲ್ ಕಾರ್ಡ್‍ಗೆ ಮಾನದಂಡವೇನೆಂದು ಪ್ರಶ್ನಿಸಿದರು. ಕಾರು ಇರೋರಿಗೂ ಬಿಪಿಎಲ್ ಕಾರ್ಡ್ ಕೊಟ್ಟಿದ್ದೀರಾ ಎಂದು ಟೀಕಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಆಹಾರ ಇಲಾಖಾಧಿಕಾರಿ ಚಂದ್ರಕಾಂತ್ ನಾಯಕ್ ಅವರು ಎರಡು ವರ್ಷದ ಹಿಂದೆ ಸುಮಾರು 2500 ಬಿಪಿಎಲ್ ಕಾರ್ಡ್‍ಗಳನ್ನು ಅನರ್ಹ ಫಲಾನುಭವಿಗಳು ಪಡೆದುಕೊಂಡಿದ್ದಾರೆ ಎಂದರು. ‘ಪಡೆದುಕೊಂಡಿದ್ದಾರೆ ಅಂದ್ರೆ ಏನ್ರೀ ಅರ್ಥ? ಬಿಪಿಎಲ್ ಕಾರ್ಡೇನು ಮಾರ್ಕೆಟಲ್ಲಿ ಸಿಗುತ್ತಾ?' ಎಂದು ಸದಸ್ಯ ಶಶಿ ಸುಬ್ರಮಣಿ ಪ್ರಶ್ನಿಸಿದರು. ಓರ್ವ ಜವಾಬ್ದಾರಿಯುತ ಅಧಿಕಾರಿಯಾಗಿದ್ದುಕೊಂಡು 2500 ಬಿಪಿಎಲ್ ಕಾರ್ಡ್ ಶ್ರೀಮಂತರ ಪಾಲಾಗಿದೆ ಎಂದು ಹೇಳುವ ಆಹಾರ ಇಲಾಖಾಧಿಕಾರಿ ವಿರುದ್ಧ ಖಂಡನಾ ನಿರ್ಣಯ ಮಾಡುವಂತೆ ಸದಸ್ಯ ಪ್ರಥ್ಯು ಒತ್ತಾಯಿಸಿದರು. ಎಷ್ಟು ಕಾರ್ಡ್ ಶ್ರೀಮಂತರ ಪಾಲಾಗಿದೆ ಎಂದು ಲೆಕ್ಕ ಕೊಡುತ್ತಿರುವ ನೀವು ಅದಕ್ಕಾಗಿ ಏನು ಕ್ರಮ ಕೈಗೊಂಡಿದ್ದೀರಾ ಎಂದು ಸದಸ್ಯೆ ಕುಮುದಾ ಧರ್ಮಪ್ಪ ಅಧಿಕಾರಿಯನ್ನು ಪ್ರಶ್ನಿಸಿದರು. ಬಡವರ ಕಾರ್ಡ್‍ಗಳನ್ನು ರದ್ದು ಮಾಡುವ ಅಧಿಕಾರಿಗಳು ಶ್ರೀಮಂತರ ಕಾರ್ಡುಗಳನ್ನು ಮಾತ್ರ ರದ್ದು ಮಾಡುವದಿಲ್ಲ ಎಂದು ಸದಸ್ಯ ಪಿ.ಎಂ. ಲತೀಫ್ ದೂರಿದರು. ಹಣ ಪಡೆದು ಬಿಪಿಎಲ್ ಕಾರ್ಡ್ ವಿತರಿಸುವದನ್ನು ನಾನೇ ಕಣ್ಣಾರೆ ಕಂಡಿದ್ದೇನೆ ಎಂದು ಸದಸ್ಯ ಶ್ರೀನಿವಾಸ್ ಹೇಳಿದರು.

ಜಿ.ಪಂ. ಸಿಇಓ ಚರುಲತಾ ಸೋಮಲ್ ಮಾತನಾಡಿ ಅನರ್ಹ ಫಲಾನುಭವಿಗಳಿಗೆ ನೀಡಲಾಗಿರುವ ಕಾರ್ಡ್‍ಗಳನ್ನು ರದ್ದುಮಾಡಬೇಕು. ಇಲ್ಲದಿದ್ದರೆ ಕ್ರಮಕೈಗೊಳ್ಳುವದಾಗಿ ಅಧಿಕಾರಿಗೆ ಎಚ್ಚರಿಸಿದರು.

ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ ಒಂದು ತಿಂಗಳೊಳಗಾಗಿ ಬಿಪಿಎಲ್ ಕಾರ್ಡ್ ಸಮಸ್ಯೆಯನ್ನು ಸರಿಪಡಿಸುವಂತೆ ಸೂಚಿಸಿದರು.

ಆರೋಗ್ಯ ಇಲಾಖೆ ವಿರುದ್ಧ ಸದಸ್ಯರಾದ ಶಿವು ಮಾದಪ್ಪ, ಕವಿತಾ ಪ್ರಭಾಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆರೋಗ್ಯ ಇಲಾಖೆಯಲ್ಲಿನ ಅಧಿಕಾರಿಗಳು ದೂರವಾಣಿ ಕರೆಗೆ ಸಿಗುವದಿಲ್ಲ. ಕರೆ ಸ್ವೀಕರಿಸುವದಿಲ್ಲ. ಸೌಲಭ್ಯಗಳನ್ನು ಒದಗಿಸುವದಿಲ್ಲ. ಜನರಿಂದ ನಾವುಗಳು ಟೀಕೆಗೊಳಗಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಗ್ಯ ಇಲಾಖೆ ಇದ್ದೂ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಕಟ್ಟೆಹಾಡಿ ಜನರಿಗೆ ಹಕ್ಕುಪತ್ರ ವಿತರಣೆಯಾಗಿಲ್ಲ; ಟಾರ್ಪಲ್ ವಿತರಿಸಿಲ್ಲ ಎಂದು ಸದಸ್ಯ ಲತೀಫ್ ಹೇಳಿದರು. ಕರಿಕೆ ಶಾಲೆಯ ಮುಖ್ಯೋಪಾಧ್ಯಾಯರನ್ನು ಬದಲಾವಣೆ ಮಾಡುವಂತೆ ಸದಸ್ಯೆ ಕವಿತಾ ಪ್ರಭಾಕರ್ ಒತ್ತಾಯಿಸಿದರು. 15 ದಿನದೊಳಗೆ ಕ್ರಮ ಕೈಗೊಳ್ಳುವದಾಗಿ ಡಿಡಿಪಿಐ ಬಸವರಾಜ್ ಹೇಳಿದರು. ಬಿಸಿಎಂ ಹಾಸ್ಟೆಲ್‍ಗಳಲ್ಲಿ ವಾರ್ಡ್‍ನ್‍ಗಳ ಕೊರತೆಯಿರುವ ಬಗ್ಗೆಯೂ ಸದಸ್ಯೆ ಪೂರ್ಣಿಮ ಗೋಪಾಲ್ ಸೇರಿದಂತೆ ಕೆಲವು ಸದಸ್ಯರು ಆಕ್ಷೇಪಿಸಿ ವಾರ್ಡನ್ ಹಾಗೂ ಶಿಕ್ಷಕರ ಭರ್ತಿಗೆ ಕ್ರಮ ವಹಿಸುವಂತೆ ಅಧಿಕಾರಿ ಸುರೇಶ್ ಅವರಿಗೆ ಸೂಚಿಸಿದರು.