ಮಡಿಕೇರಿ ಜೂ.10 : ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಂದರ್ಭ ಶಾಸಕರನ್ನು ನಿರ್ಲಕ್ಷಿಸುತ್ತಿದ್ದು, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿಯ ಜಿಲ್ಲಾ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಸ್ತುವಾರಿ ಸಚಿವರು ತರಾತುರಿಯಲ್ಲಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಶಾಸಕರುಗಳಿಗೆ ಯಾವದೇ ಮಾಹಿತಿ ಲಭ್ಯವಾಗುತ್ತಿಲ್ಲ. ಆಹ್ವಾನ ಪತ್ರಿಕೆ ಕೂಡ ಕೊನೇ ಗಳಿಗೆಯಲ್ಲಿ ಮುದ್ರಣಗೊಳ್ಳುತ್ತಿದೆ. ಜಿ.ಪಂ. ಮತ್ತು ತಾ.ಪಂ. ಅಧ್ಯಕ್ಷರನ್ನು ನಿರ್ಲಕ್ಷಿಸಲಾಗುತ್ತಿದ್ದು, ಸಚಿವರು ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳು ಉದ್ಘಾಟನೆಗೊಳ್ಳುತ್ತಿದ್ದು, ಇದರ ಮಾಹಿತಿಯನ್ನು ನೀಡದೆ ತಾವೇ ಉದ್ಘಾಟಿಸುವ ಮೂಲಕ ತಮ್ಮ ಸರ್ಕಾರದ ಕಾರ್ಯಕ್ರಮವೆಂದು ಪ್ರತಿಬಿಂಬಿಸಲು ಸಚಿವ ದಿನೇಶ್ ಗುಂಡೂರಾವ್ ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ನಾಪೋಕ್ಲು ವ್ಯಾಪ್ತಿಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದ ಸೇತುವೆ ಉದ್ಘಾಟನೆಗೆ ಲೋಕೋಪಯೋಗಿ ಇಲಾಖೆ ಸಚಿವರನ್ನು ಕರೆ ತರುವಂತೆ ತಿಳಿಸಿದ್ದರೂ, ಉಸ್ತುವಾರಿ ಸಚಿವರು ಮಾತ್ರ ಆಗಮಿಸಿ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಪಿಡಬ್ಲ್ಯುಡಿ ಸಚಿವರ ಆಗಮನವಾಗಿದ್ದರೆ, ಸ್ಥಳೀಯರ ಬೇಡಿಕೆಗಳನ್ನು ಅವರ ಗಮನಕ್ಕೆ ತರಬಹುದಾಗಿತ್ತು ಎಂದು ಅಭಿಪ್ರಾಯಪಟ್ಟರು.

ಅಕ್ರಮ ಸಕ್ರಮ ಸಮಿತಿ ಮೂಲಕ ಕಡತಗಳು ವಿಲೇವಾರಿಯಾಗುತ್ತಿಲ್ಲ ಎಂದು ಕಾಂಗ್ರೆಸಿಗರು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುವ ಬದಲು ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ಮನೆ ಎದುರು ಪ್ರತಿಭಟನೆ ನಡೆಸಲಿ ಎಂದು ಸವಾಲು ಹಾಕಿದರು. ಸಮಿತಿಯ ಸಭೆಯನ್ನು ಶಾಸಕರುಗಳು ನಡೆಸುತ್ತಿಲ್ಲ ಎಂದು ವಿನಾ ಕಾರಣ ಆರೋಪಿಸಿದ್ದು, ಸಭೆ ನಡೆದರೆ ಬಹುತೇಕ ಬಡವರ ಅರ್ಜಿಗಳು ಸಿ ಮತ್ತು ಡಿ ಭೂಮಿ ಎನ್ನುವ ಕಾರಣಕ್ಕಾಗಿ ಅನೂರ್ಜಿತಗೊಳ್ಳುವ ಸಾಧ್ಯತೆಗಳಿದೆ. ಇದರಿಂದ ಬಡವರಿಗೆ ಅನ್ಯಾಯವಾಗಲಿದೆ ಎಂದು ಸುಬ್ರಮಣ್ಯ ಉಪಾಧ್ಯಾಯ ಅಭಿಪ್ರಾಯಪಟ್ಟರು. ಸಿ ಮತ್ತು ಡಿ ಭೂಮಿ ವಿಚಾರದಲ್ಲಿ ಸರ್ಕಾರ ಗೊಂದಲ ಸೃಷ್ಟಿಸಿದೆ ಎಂದು ಆರೋಪಿಸಿದ ಅವರು ಮೊದಲು ಕಂದಾಯ ಭೂಮಿ ಹಾಗೂ ಸಿ ಮತ್ತು ಡಿ ಭೂಮಿಯನ್ನು ಗುರುತಿಸುವ ಕೆಲಸವಾಗಬೇಕೆಂದು ಒತ್ತಾಯಿಸಿದರು.

ಸರ್ಕಾರ ಭೂ ಮಂಜೂರಾತಿ ಸಮಿತಿಯನ್ನು ರಚಿಸಿದ್ದು, ಈ ಬಗ್ಗೆ ಇಲ್ಲಿಯವರೆಗೆ ಶಾಸಕರಿಗೆ ಮಾಹಿತಿಯನ್ನೇ ನೀಡಲ್ಲವೆಂದು ಆರೋಪಿಸಿದ ಸುಬ್ರಮಣ್ಯ ಉಪಾಧ್ಯಾಯ ಶಾಸಕರು ಯಾವಾಗ ಬೇಕಾದರೂ ಸಭೆಯನ್ನು ನಡೆಸಲು ಸಿದ್ಧರಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸಂಪಾಜೆ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಸೂಕ್ತ ಚಿಕಿತ್ಸೆ ನೀಡಲು ಆರೋಗ್ಯ ಕೇಂದ್ರದಲ್ಲಿ ವೈದ್ಯರ ಮತ್ತು ಶುಶ್ರೂಷಕಿಯರ ಕೊರತೆ ಎದುರಾಗಿದೆ. ಬಡವರು ಸಂಕಷ್ಟವನ್ನು ಎದುರಿಸುತ್ತಿದ್ದು, ಆರೋಗ್ಯ ಕೇಂದ್ರಗಳ ಅವ್ಯವಸ್ಥೆಗೆ ಸರ್ಕಾರದ ವೈಫಲ್ಯವೇ ಕಾರಣವೆಂದು ಆರೋಪಿಸಿದರು.

ಸಮಸ್ಯೆಗಳಿಗೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವದು ಎಂದು ಸುಬ್ರಮಣ್ಯ ಎಚ್ಚರಿಕೆ ನೀಡಿದರು. ದೇವಟ್ ಪರಂಬು ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸುಬ್ರಮಣ್ಯ ಉಪಧ್ಯಾಯ ಇದು 2 ಸಮಾಜಗಳಿಗೆ ಸಂಬಂಧಪಟ್ಟ ವಿಚಾರವಾಗಿರುವದರಿಂದ ಇದರಲ್ಲಿ ರಾಜಕೀಯ ಪ್ರವೇಶವಾಗುವದು ಬೇಡ ಎಂದು ಅಭಿಪ್ರಾಯಪಟ್ಟರು. ಮಾತುಕತೆಗೆ ಎರಡು ಸಮಾಜದವರು ಕರೆದರೂ ಹೋಗಲು ಶಾಸಕರುಗಳು ಸಿದ್ಧರಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು. ಮಡಿಕೇರಿ ತಾ.ಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮಾತನಾಡಿ ಕಾಂಗ್ರೆಸ್ ಆಡಳಿತ ವ್ಯವಸ್ಥೆಯಲ್ಲಿ ತಮಗೆ ಸೂಕ್ತ ಗೌರವ ಸಿಗುತ್ತಿಲ್ಲವೆಂದು ಆರೋಪಿಸಿದರು.