(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಜೂ. 21: ಜಿಲ್ಲೆಯಲ್ಲಿ ಮುಂಗಾರು ಆರಂಭಗೊಂಡಿದೆ. ಜಿಲ್ಲಾ ಕೇಂದ್ರವಾದ ಮಡಿಕೇರಿಯ ಮಳೆಗಾಲದ ಚಿತ್ರಣ ಬಹುಶಃ ಇಡೀ ಜಿಲ್ಲೆಯ ಜನತೆಗೆ ಅರಿವಿದೆ. ಈ ಪರಿಸ್ಥಿತಿಯನ್ನು ಎದುರಿಸುವ ಅನಿವಾರ್ಯತೆಯ ನಡುವೆ ಇದೀಗ ಇಡೀ ನಗರದಲ್ಲಿನ ಬಹುದೊಡ್ಡ ಸಮಸ್ಯೆ ಎಂದರೆ ಟ್ರಾಫಿಕ್ ಕಿರಿಕಿರಿ...
ಮಳೆಗಾಲ ಆರಂಭಗೊಂಡರೂ ನಗರಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ. ಕಳೆದ ನಾಲ್ಕೈದು ದಿನಗಳಿಂದ ನಗರದಲ್ಲಿ ಪ್ರವಾಸಿಗರ ಓಡಾಟ ಹೆಚ್ಚಾಗಿದ್ದು, ಮಳೆಗಾಲದ ಮಜಾ ಅನುಭವಿಸುತ್ತಿದ್ದಾರೆ. ಪ್ರವಾಸಿಗರು ಮಾತ್ರವಲ್ಲದೆ ಜಿಲ್ಲಾ ಕೇಂದ್ರವಾಗಿರುವದರಿಂದ ಹತ್ತು ಹಲವು ಕೆಲಸ-ಕಾರ್ಯಗಳಿಗಾಗಿ ಜಿಲ್ಲೆಯ ವಿವಿಧೆಡೆಗಳಿಂದಲೂ ಸಾರ್ವಜನಿಕರು ಕೂಡ ದಿನಂಪ್ರತಿ ಆಗಮಿಸುವದರಿಂದ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ.
ಈ ನಡುವೆ ಮಹದೇವಪೇಟೆ ರಸ್ತೆ ಕಾಮಗಾರಿ ಸೇರಿದಂತೆ ಹಲವಾರು ಕಡೆಗಳಲ್ಲಿ ರಸ್ತೆ ಕೆಲಸದಿಂದಾಗಿ ಸಂಚಾರ ನಿರ್ಬಂಧಗೊಂಡಿದೆ. ಇಡೀ ನಗರ ವ್ಯಾಪ್ತಿಯಲ್ಲಿನ ಮುಖ್ಯ ರಸ್ತೆಯಲ್ಲಿ ಆಗಿಂದಾಗ್ಗೆ ಟ್ರಾಫಿಕ್ ಜಾಂ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ದ್ವಿಚಕ್ರವಾಹನ ಸವಾರರ ಪಾಡಂತೂ ಹೇಳತೀರದು. ಟ್ರಾಫಿಕ್ ಜಾಂನಲ್ಲಿ ಸಿಕ್ಕಿ ಹಾಕಿಕೊಂಡ ಸಂದರ್ಭ ದಿಢೀರನೆ ಮಳೆ ಸುರಿದಲ್ಲಿ ಅತ್ತ ರಸ್ತೆ ಬದಿ ವಾಹನ ನಿಲ್ಲಿಸಲೂ
ಸಾಧ್ಯವಾಗದೆ ಇತ್ತ ಮುಂದುವರಿಯಲೂ ಸಾಧ್ಯವಾಗದೆ ಪರಿತಪಿಸುವದರೊಂದಿಗೆ ಮಳೆಯಲ್ಲಿ ತೊಯ್ದು ತೊಪ್ಪೆಯಾಗಬೇಕಾಗುತ್ತದೆ. ಅದರಲ್ಲೂ ಮಹಿಳೆಯರು, ಯುವತಿಯರು ಮುಜುಗರವನ್ನೂ ಅನುಭವಿಸುವದು ಉಂಟು.
ನಗರದಲ್ಲಿ ವಾಹನ ನಿಲುಗಡೆಗೆ ಪ್ರಶಸ್ತ ಸ್ಥಳ ಇಲ್ಲದಿರುವದು ಸಂಚಾರ ವ್ಯವಸ್ಥೆಯಲ್ಲಿ ಕಿರಿಕಿರಿಯಾಗಲು ಮುಖ್ಯ ಕಾರಣವಾಗಿದೆ. ಪಾರ್ಕಿಂಗ್‍ಗೆ ಅವಕಾಶವಿರುವ ಸ್ಥಳಗಳು ಬೆಳಿಗ್ಗೆ 9-10 ಗಂಟೆಯ ಸುಮಾರಿಗೆ ಭರ್ತಿಯಾಗಿಬಿಟ್ಟಿರುತ್ತವೆ. ನಿರ್ದಿಷ್ಟ ಸ್ಥಳದ ಸಮೀಪ ಪಾರ್ಕಿಂಗ್ ಸಿಗುತ್ತದೆ ಎಂದು ಭಾವಿಸುವದು ಕನಸೇ ಸರಿ. ನಗರದ ಅಂಗಡಿ ಮಾಲೀಕರುಗಳು ಅದನ್ನು ತೆಗೆಯುವದು ಅಂಗಡಿ ಮುಚ್ಚುವಾಗಲೇ ಎಂಬ ಸಾರ್ವಜನಿಕ ಆರೋಪವೂ ಒಂದೆಡೆಯಿದೆ.
ಇನ್ನು ಕೆಲವರು ತಮ್ಮ ಮಳಿಗೆಗಳ ಎದುರು ವಾಹನ ನಿಲ್ಲದಂತೆ ಚೈನ್ ಅಳವಡಿಸಿ ಇಟ್ಟುಕೊಂಡಿರುವ ಉದಾಹರಣೆ ಗಳೂ ಇದ್ದು, ಒಂದೆರಡು ವಾಹನಗಳ ನಿಲುಗಡೆಗೆ ಅವಕಾಶ ಇಲ್ಲದಂತಾಗು ತ್ತಿದೆ. ಇನ್ನು ಕೆಲವಾರು ಮಂದಿ ವಾಹನ ಮಾಲೀಕರೂ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದಿರುವದು ವಿಷಾದಕರ. ಏನಾದರೂ ಖರೀದಿಸಬೇಕಾದರೆ ಆ ಅಂಗಡಿ ಎದುರು ರಸ್ತೆ ನಡುವೆಯೇ ವಾಹನ ನಿಲ್ಲಿಸಿ ತೆರಳಿಬಿಡುತ್ತಾರೆ. ಅವರು ಮರಳುವವರೆಗೆ ರಸ್ತೆಯಲ್ಲಿ ಟ್ರಾಫಿಕ್ ಜಾಂ ಖಚಿತ... ಇನ್ನು ನಿಲುಗಡೆ ಸ್ಥಳದಲ್ಲಿ ವಾಹನ ನಿಲ್ಲಿಸಿದವರು ವಾಹನ ತೆಗೆಯುವದು ಗಮನಕ್ಕೆ ಬಂದರೆ ಆ ವಾಹನ ‘ರಿವರ್ಸ್’ ತೆಗೆಯುವವರೆಗೆ ಮುಂದೆ ಇರುವ ವಾಹನದವರು ಜಪ್ಪಯ್ಯ ಅಂದರೂ ತನಗೆ ನಿಲುಗಡೆಗೆ ಅವಕಾಶ ದೊರೆಯಿತಲ್ಲ ಎಂಬ ಕಾರಣಕ್ಕೆ ಕಿವಿತಮಟೆ ಒಡೆಯುವಂತೆ ‘ಹಾರ್ನ್’ ಮಾಡಿದರೂ ಕ್ಯಾರೇ ಎನ್ನಲಾರ...
ಎಲ್ಲವನ್ನೂ ನಿರ್ವಹಿಸಬೇಕಾದ ಕರ್ತವ್ಯನಿರತ ಸಂಚಾರಿ ಪೊಲೀಸರೂ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ‘ಇನ್‍ಫ್ಲುಯನ್ಸ್’ ಮುಖಪರಿಚಯ, ಸ್ನೇಹಾಚಾರವೂ ಇವರನ್ನು ಕಟ್ಟಿ ಹಾಕುತ್ತದೆ. ಜತೆಗೆ ಅಗತ್ಯ ಸಿಬ್ಬಂದಿಗಳ ಕೊರತೆ ಬೇರೆ... ಶಾಲಾ-ಕಾಲೇಜು ಸಮಯದಲ್ಲಂತೂ ಟ್ರಾಫಿಕ್‍ನ ಗೋಳು ಬಲು ಜೋರು... ಈ ಸಂದರ್ಭದಲ್ಲಿ ಮಡಿಕೇರಿ ನಗರ ಬಹುಶಃ ನೋಡುಗರಿಗೆ ಬೆಂಗಳೂರು ಮಹಾನಗರವನ್ನು ನೆನಪಿಸುತ್ತದೆ...
ನಗರದಲ್ಲಿ ಸಂಚಾರ ವ್ಯವಸ್ಥೆ ದಿನೇ ದಿನೇ ಹೆಚ್ಚಾಗುತ್ತಿದೆ. ಯಾರೋ ಒಬ್ಬರು ತಮಾಷೆಗೆ ಹೇಳಿದಂತೆ ಒಮ್ಮೊಮ್ಮೆ ನೀವು ಬ್ರೇಕ್ ಫಾಸ್ಟ್‍ಗೆಂದು ಹೊರಟರೆ ತಲುಪುವದು ಲಂಚ್‍ಗೇನೇ... ನಗರದಲ್ಲಿ ಮದುವೆಗೆಂದು ಆಗಮಿಸುವ ಹಲವರು ಮಂಟಪ ತಲುಪಲು ಇದೇ ಅನುಭವಪಟ್ಟಿದ್ದಾರೆ.
ಗಮನ ಹರಿಸೋರಾರು...?
ಟ್ರಾಫಿಕ್ ಸಮಸ್ಯೆ ಉಲ್ಭಣಗೊಂಡರೂ ಈ ಬಗ್ಗೆ ಬಹುಶಃ ಯಾರೂ ಗಂಭೀರ ಚಿಂತನೆ ಮಾಡುತ್ತಿಲ್ಲ... ಇಡೀ ಜಿಲ್ಲೆಯಲ್ಲಿ ಮಡಿಕೇರಿಯಲ್ಲಿ ಮಾತ್ರ ಸಂಚಾರಿ ಪೊಲೀಸ್ ಠಾಣೆಯಿದೆ. ಈ ಠಾಣೆಯಲ್ಲಿ ಓರ್ವ ಎಸ್.ಐ., ಮೂವರು ಎ.ಎಸ್.ಐ. ಹಾಗೂ 24 ಪಿ.ಸಿ ಹುದ್ದೆಗೆ ಮಂಜೂರಾತಿ ಇದೆ. ಎಸ್.ಐ. ಹಾಗೂ ಎ.ಎಸ್.ಐ. ಸ್ಥಾನ ತುಂಬಿದ್ದರೂ 24 ಪಿ.ಸಿ.ಗಳ ಪೈಕಿ ಇರುವದು 12 ಮಂದಿ ಮಾತ್ರ. 12 ಹುದ್ದೆ ಖಾಲಿ ಬಿದ್ದಿದೆ. ಇರುವ ಸಿಬ್ಬಂದಿಗಳು ಪ್ರಸ್ತುತ ಮೂವರು ಮಹಿಳಾ ಹೋಂಗಾಡ್ರ್ಸ್‍ಗಳನ್ನು ಬಳಸಿಕೊಂಡು ಹೇಗೋ ಹೆಣಗಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಳೆಗಾಲದಲ್ಲಿ ಸಂಚಾರಿ ಪೊಲೀಸರ ಕೆಲಸ ಗಮನಿಸಿದರೆ ಯಾರಿಗೂ ಮರುಕ ಹುಟ್ಟುತ್ತದೆ.
ನಗರದ ಜಿ.ಟಿ. ವೃತ್ತದಿಂದ ಕೈಗಾರಿಕಾ ಬಡಾವಣೆ, ಖಾಸಗಿ ಬಸ್ ನಿಲ್ದಾಣದಿಂದ ಎಸ್.ಬಿ.ಐ. ತನಕ ಆಟೋ ನಿಲ್ದಾಣಗಳು, ಟ್ಯಾಕ್ಸಿ ಸ್ಟ್ಯಾಂಡ್, ಲಾರಿ ಸ್ಟ್ಯಾಂಡ್, ಜೀಪು ಸ್ಟ್ಯಾಂಡ್ ಹೀಗೆ ಇರುವ ಸ್ಥಳಗಳೆಲ್ಲ ನಿಲ್ದಾಣಗಳೇ ಆಗಿವೆ. ಹೊಸದಾಗಿ ತಲೆ ಎತ್ತಿರುವ ಹೊಟೇಲ್‍ಗಳ ಎದುರು ರಸ್ತೆಯ ಎರಡು ಬದಿಯಲ್ಲೂ ಸಾಲು ಸಾಲು ವಾಹನಗಳು ನಿಂತಿರುತ್ತವೆ. ಕಟ್ಟಡಗಳಿಗೆ ಅನುಮತಿ ನೀಡುವಾಗ ನಿಲುಗಡೆ ವಿಚಾರದ ನಿಯಮವೂ ಪಾಲನೆ ಆಗುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ, ಮಡಿಕೇರಿ ನಗರಸಭೆ, ಜನಪ್ರತಿನಿಧಿಗಳು ತುರ್ತಾಗಿ ಗಂಭೀರ ಚಿಂತನೆ ನಡೆಸಲೇಬೇಕಾಗಿದೆ.