ಚೆಟ್ಟಳ್ಳಿ, ಜೂ. 21: ಬೆಂಗಳೂರಿನ ಕರ್ನಾಟಕ ಛಾಯಾ ಚಿತ್ರ ಗಾಹಕರ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಜ್ಯದ ಸಮಸ್ತ ಛಾಯಾ ಚಿತ್ರೋದ್ಯಮಿಗಳು ಜುಲೈ 2 ರಂದು ಬಂದ್ ನಡೆಸಲು ತೀರ್ಮಾನಿಸಿದ್ದಾರೆ.

ರಾಜ್ಯದಾದ್ಯಂತ ಅದೆಷ್ಟೋ ಛಾಯಾಚಿತ್ರೋದ್ಯಮಿಗಳು ತಮ್ಮ ಸ್ವ ಉದ್ಯೋಗವನ್ನು ನಂಬಿ ತಮ್ಮ ಕುಟುಂಬವನ್ನು ಸಾಕುತ್ತಿದ್ದಾರೆ. ಇಂತಹ ವ್ರತ್ತಿಭಾಂದವರ ಬದುಕಿಗೆ ಕೆಲವೊಂದು ಕಡೆಗಳಿಂದ ವೃತ್ತಿಗೆ ಕಂಟಕವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೂಡ ಈ ಉದ್ಯಮದಾರರಿಗೆ ಭವಿಷ್ಯದ ಬುನಾದಿ ಹಾಕಲು ಮುಂದಾಗದೆ ನಿರ್ಲಕ್ಷಿಸುತ್ತಿದೆ. ಆದ್ದರಿಂದ ಹಳ್ಳಿಯಿಂದ ದಿಲ್ಲಿಯವರೆಗೆ ಇವರ ಸಮಸ್ಯೆ ಹಾಗೂ ಬೇಡಿಕೆಗಳನ್ನು ತಲಪಿಸಲು ಆಯಾಯ ತಾಲೂಕು, ಜಿಲ್ಲೆಗಳಲ್ಲಿ ಜುಲೈ 2 ರಂದು ರಾಜ್ಯದ ಸಮಸ್ತ ಛಾಯಾ ಚಿತ್ರೋದ್ಯಮಿಗಳು ಒಂದು ದಿನದ ಶಾಂತಿಯುತ ಬಂದ್ ನಡೆಸಿ ಜಾಥಾದಲ್ಲಿ ತೆರಳಿ ತಹಶೀಲ್ದಾರರಿಗೆ, ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಹಾಗೂ ಸಂಸದರಿಗೆ ಮನವಿ ಸಲ್ಲಿಸಲಿದ್ದಾರೆ. ಸರಕಾರಕ್ಕೆ 11 ಬೇಡಿಕೆ ಇಡಲಾಗಿದೆ:

ಸ್ಟುಡಿಯೋದಲ್ಲಿ ತೆಗೆದ ಪಾಸ್ ಪೋರ್ಟ್‍ಗಳನ್ನೇ ಸರಕಾರಿ ಅವಶ್ಯಕತೆಗೆ ಉಪಯೋಗಿಸಿ ಉದ್ಯೋಗಿಗಳನ್ನು ಉಳಿಸಬೇಕು. ಛಾಯಾಗ್ರಾಹಕರನ್ನು ಉಳಿಸಿ-ಬೆಳೆಸಲು ಪ್ರತ್ಯೇಕ ಅಕಾಡೆಮಿಯಾಗಬೇಕು ಹಾಗೂ ನುರಿತ ಛಾಯಾಗ್ರಾಹಕರನ್ನು ಗುರುತಿಸಿ ಸನ್ಮಾನ, ಪ್ರಶಸ್ತಿ ಪುರಸ್ಕಾರವನ್ನು ನೀಡಬೇಕು. ಪ್ರತೀ ಜಿಲ್ಲೆಯಲ್ಲಿ ನಡೆಯುವ ಸರಕಾರಿ ಕಾರ್ಯಕ್ರಮ ಹಾಗೂ ಜಿಲ್ಲಾ ಉತ್ಸವಗಳ ಛಾಯಾಗ್ರಹಣದ ಜವಾಬ್ದಾರಿಯನ್ನು ಆಯಾ ಜಿಲ್ಲೆಯ ವೃತ್ತಿಪರ ಛಾಯಾಗ್ರಾಹಕರಿಗೆ ನೀಡಿ ಗುತ್ತಿಗೆದಾರರಿಗೆ ನೀಡಬಾರದು. ಪ್ರತೀ ಚುನಾವಣೆಯ ಸಂದÀರ್ಭ ವೃತ್ತಿಪರ ಛಾಯಾಗ್ರಾಹಕರಿಗೆ ನೀಡಬೇಕು. ಸರಕಾರಿ ವ್ಯಾಟ್ ಕಾಯಿದೆಯ ಪ್ರಕಾರ ಛಾಯಾಗ್ರಹಣದ ಹಳೆ ಬಾಕಿಯೆಂದು 2004-05ರಿಂದ ಕಟ್ಟಲು ಹೇಳಿರುವ ಕಂದಾಯವನ್ನೆಲ್ಲ ಮನ್ನಾ ಮಾಡಿ 2015 ರಿಂದೀಚಿಗೆ ಕಟ್ಟಲು ಆದೇಶ ನೀಡಬೇಕು. ವೃತ್ತಿಪರ ಛಾಯಾ ಗ್ರಾಹಕರಿಗೆ ಜೀವ ವಿಮೆ, ಆರೋಗ್ಯ ವಿಮೆ, ಈಎಸ್‍ಐ ಸೌಲಭ್ಯ, ಯಶಸ್ವಿನಿ, ಬಿಪಿಎಲ್ ಕಾರ್ಡ್ ಹಾಗೂ ಪಿಂಚಣಿ ಯೋಜನೆಯಡಿ ಸೇರಿಸಬೇಕು. ಸಂತ್ರಸ್ತ ಛಾಯಾಗ್ರಾಹಕರಿಗೆ ಒಂದು ಕಲ್ಯಾಣ ನಿಧಿಯ ಮೂಲಕ ಸಹಾಯವಾಗುವಂತೆ ಪ್ರತ್ಯೇಕ ಕಲ್ಯಾಣ ನಿಧಿಯನ್ನು ಸರಕಾರ ಸ್ಥಾಪಿಸಬೇಕು. ಛಾಯಾಗ್ರಹಣ ಕ್ಷೇತ್ರಕ್ಕೆ ಸಂಬಂಧಿಸಿದ ಹೊಸ ತಂತ್ರಜ್ಞಾನ ಹೊಂದಿರುವ ದುಬಾರಿ ಸಲಕರಣೆಗಳನ್ನು ಕೊಳ್ಳಲು ಸುಲಭ ದರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ದೊರೆಯುವಂತಾಗಬೇಕು. ರಾಜ್ಯದ ಎಲ್ಲಾ ಛಾಯಾಗ್ರಾಹಕ ಮಕ್ಕಳಿಗೆ ಆರ್‍ಟಿಯಿ ಮೂಲಕ ವಿದ್ಯಾಭ್ಯಾಸ ದೊರಕುವಂತೆ ಹಾಗೂ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ಸರ್ಕಾರಿ ವೃತ್ತಿಯಲ್ಲಿದ್ದು ಛಾಯಾಗ್ರಹಣ ಮಾಡುತ್ತಿರುವ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಪ್ರತೀ ಜಿಲ್ಲೆಗೊಂದು ಛಾಯಾಭವನ ನಿರ್ಮಿಸಲು ಸರ್ಕಾರದಿಂದ ನಿವೇಶನ ಹಾಗೂ ಆರ್ಥಿಕ ನೆರವು ನೀಡಬೇಕು ಎಂಬ ಹಲವು ಬೇಡಿಕೆಯನ್ನು ಸರಕಾರದ ಮುಂದಿಟ್ಟು ಬಂದ್ ನಡೆಸಲಾಗುವದೆಂದು ಕೊಡಗು ಜಿಲ್ಲಾ ಛಾಯಾಚಿತ್ರ ಗ್ರಾಹಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.