ಮಡಿಕೇರಿ, ಜೂ. 25 : ಕರಿಕೆ ಗ್ರಾಮದಲ್ಲಿ ಮೃತಪಟ್ಟ ಹೊಸಮನೆ ಕಮಲಾಕ್ಷಿ (ಸುಶೀಲಾ) (55) ಮತ್ತು ಪ್ರಮೋದ್ ಕುಮಾರ್ (38) ಅವರ ಮನೆಗೆ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮತ್ತಿತರರು ಶನಿವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಬಳಿಕ ಮಾತನಾಡಿದ ಕೆ.ಜಿ. ಬೋಪಯ್ಯ ಅವರು ಕುಟುಂಬದವರ ಆಧಾರ ಸ್ತಂಭವಾಗಿದ್ದ ಪ್ರಮೋದ್ ಕುಮಾರ್ ಮತ್ತು ಕಮಲಾಕ್ಷಿ ಅವರು ಮೃತಪಟ್ಟಿರುವದರಿಂದ ಕುಟುಂಬ ದವರಿಗೆ ಅಪಾರ ನಷ್ಟವಾಗಿದೆ. ಈ ಸಂಬಂಧ ಕುಟುಂಬಕ್ಕೆ ಪರಿಹಾರ ನೀಡುವಂತಾಗಲು ಸರ್ಕಾರದ ಗಮನ ಸೆಳೆಯಲಾಗುವದು. ಜುಲೈ 4 ರಿಂದ ನಡೆಯುವ ವಿಧಾನಸಭಾ ಅಧಿವೇಶನದಲ್ಲಿ ಡೆಂಗಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಷಯ ಪ್ರಸ್ತಾಪಿಸ ಲಾಗುವದು. ಹಾಗೆಯೇ ಈ ಕುಟುಂಬಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಲಾಗುವದು ಎಂದು ಹೇಳಿದರು.
ಇಲ್ಲಿನ ಜನರು ಆರೋಗ್ಯ ಸಂಬಂಧಿಸಿದಂತೆ ಹೆಚ್ಚಿನ ಗಮನಹರಿಸಬೇಕಿದೆ. ಜನರಿಗೆ ಧೈರ್ಯ ತುಂಬುವ ಕೆಲಸವಾಗಬೇಕು ಎಂದರು. ಶಾಸಕ ಎಂ.ಪಿ.ಸುನಿಲ್ ಸುಬ್ರಮಣಿ ಮಾತನಾಡಿ, ಡೆಂಗಿ ನಿಯಂತ್ರಣ ಸಂಬಂಧಿಸಿದಂತೆ ಆರೋಗ್ಯ ಸಚಿವರ ಗಮನ ಸೆಳೆಯಲಾಗುವದು. ಡೆಂಗಿ ನಿಯಂತ್ರಣ ಮಾಡಲು ಜನರ ಸಹಕಾರ ಮುಖ್ಯ. ಸ್ವಚ್ಛತೆ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಅವರು ಹೇಳಿದರು. ಇಲ್ಲಿ ಮೃತಪಟ್ಟ ಕುಟುಂಬದವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವದು ಎಂದು ಭರವಸೆ ನೀಡಿದರು. ಜಿ. ಪಂ. ಅಧ್ಯಕ್ಷ ಬಿ.ಎ.ಹರೀಶ್, ತಾ. ಪಂ. ಅಧ್ಯಕ್ಷೆÀ ತೆಕ್ಕಡೆ ಶೋಭಾ, ಜಿ. ಪಂ. ಸದಸ್ಯ ಕವಿತಾ ಪ್ರಭಾಕರ್ ಮಾತನಾಡಿದರು. ಬಳಿಕ ಕರಿಕೆ ಸರ್ಕಾರಿ ಪ್ರೌಢಶಾಲೆಗೆ ಶಾಸಕರು ಭೇಟಿ ನೀಡಿ ಶಿಕ್ಷಕರ ಸಂಖ್ಯೆ, ಎಸ್.ಎಸ್.ಎಲ್.ಸಿ. ಫಲಿತಾಂಶ, ಮೂಲಭೂತ ಸೌಲಭ್ಯ ಮತ್ತಿತರ ಸಂಬಂಧ ಹಲವು ಮಾಹಿತಿ ಪಡೆದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಗೈರು ಆಗುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗಿದೆ ಎಂದು ಸ್ಥಳೀಯರು ಶಾಸಕರ ಗಮನಕ್ಕೆ ತಂದರು.